ಓದಲೇಬೇಕಾದ ಪುಸ್ತಕಗಳು

Update: 2023-06-08 19:30 GMT

ನಾನು ಯಾವುದೇ ಕೃತಿಯನ್ನು ಓದುವ ಮುನ್ನ ಅದರ ಮುನ್ನುಡಿ, ಬ್ಲರ್ಬ್ ಇವನ್ನು ದಾಟಿಯೇ ಓದನ್ನು ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾಃ ಎಂಬ ಹಾಗೆ ಉದ್ಗರಿಸುತ್ತೇನೆ. ಮುನ್ನುಡಿಯನ್ನು/ಗಳನ್ನು ಓದಿದರೆ ಯಾವ ಕೃತಿಯಲ್ಲೂ ದೋಷವಿರದು. ಅದು ಕನ್ನಡಕ್ಕೆ ಕೊಟ್ಟ ವಿನೂತನ ಕೊಡುಗೆ. ಬರೆದವರು ಎಳೆಯರಾದರೆ ಮತ್ತು ಮುನ್ನುಡಿಕಾರರು ಹಿರಿಯರಾದರೆ ಆ ಲೇಖಕ ಭರವಸೆ ಮೂಡಿಸುವ ಬರಹಗಾರ.


ತಾವು ಬರೆದದ್ದನ್ನು ಮಾತ್ರ, ಇಷ್ಟೇ ಅಲ್ಲ, ತಾನೇ ಬರೆದದ್ದನ್ನೂ ಮತ್ತೆ ಓದದ ಬರಹಗಾರರಿರುವ ಮತ್ತು ಓದುಗರ ಸಂಖ್ಯೆಯು ಜೀವನ ಮೌಲ್ಯಗಳಿಗಿಂತಲೂ ಶೀಘ್ರವಾಗಿ ಕುಸಿಯುತ್ತಿರುವ ಈ ಕಾಲದಲ್ಲಿ ಕನ್ನಡ ಪುಸ್ತಕಗಳ ಬಗ್ಗೆ ವಿಮರ್ಶೆಯ ಹೆಸರಿನಲ್ಲಿ ಬರುವ ಅನೇಕ ಲೇಖನಗಳು ಕೊನೆಗೆ ಇದು ಎಲ್ಲರೂ ಓದಲೇ ಬೇಕಾದ ಪುಸ್ತಕ ಎಂದು ಕೊನೆಗೊಳಿಸುವುದುಂಟು. ನನಗೆ ಇದು ಬಹಳ ಅಚ್ಚರಿ ತರುವ ವಿಚಾರ. ಓದದಿದ್ದರೆ ಏನಾಗುತ್ತದೆ ಎಂದು ಕೇಳಬೇಕೆನಿಸುತ್ತದೆ. ಆದರೆ ಏನೂ ಇಲ್ಲ ಎಂಬ ಸಹಜ ಮತ್ತು ಉಡಾಫೆ ಅನ್ನಿಸುವ ಉತ್ತರ ಎದುರಾಗಬಹುದೆಂಬ ಕಾರಣಕ್ಕೆ ಸುಮ್ಮನಿರುತ್ತೇನೆ. ಆದರೆ ಆ ಹೊಗಳಿಕೆಯ ಮದುಮಗ ಮಾತ್ರ ಇದನ್ನು ತನ್ನ ಪರಿಚಿತರಿಗೆಲ್ಲ ಹಂಚುತ್ತಾನೆ- ತನ್ನ ಮದುವೆ ಆಲ್ಬಮ್ಮಿನ ಹಾಗೆ. ಇದು ಹೇಗಿದೆಯೆಂದರೆ ನೋಡಲೇ ಬೇಕಾದ ಚಲನಚಿತ್ರ ಎಂದೋ, ಕೇಳಲೇಬೇಕಾದ ಹಾಡು/ಸಂಗೀತ ಎಂದೋ, ಹೇಳಿದಂತೆ. ಚಲನಚಿತ್ರ ಜಾಹೀರಾತಿನಲ್ಲಿ ಮನೆಮಂದಿಯೆಲ್ಲ ನೋಡಬೇಕಾದ ಚಲನಚಿತ್ರ ಎಂಬ ಪದಗಳಿರುವುದುಂಟು. ಒಬ್ಬರೇ ನೋಡಬೇಕಾದ ಚಲನಚಿತ್ರ ಎಂಬ ಜಾಹೀರಾತನ್ನು ನಾನಿನ್ನೂ ನೋಡಿಲ್ಲ. ಹಾಗೆಯೇ ಮನೆಮಂದಿಯೆಲ್ಲ ಓದಬೇಕಾದ, ಒಬ್ಬರೇ ಕುಳಿತು ಓದಬೇಕಾದ ಮತ್ತು ಓದಬಾರದ ಪುಸ್ತಕ ಎಂಬ ವಿಮರ್ಶೆಯು ನನ್ನ ಗಮನಕ್ಕಿನ್ನೂ ಬಂದಿಲ್ಲ.

ಸಮಾಜ ಮುನ್ನಡೆಯುವಾಗ ಮತ್ತು ಹಿನ್ನಡೆಯುವಾಗ ಅದರ ಎಲ್ಲ ಅಂಗಗಳು- ಅಧಿಕಾರದಿಂದ ಅಪರಾಧದವರೆಗೆ, ಧರ್ಮ ಎಂಬ ಮತೀಯ ಸೋಗಿನಿಂದ ಅಧ್ಯಾತ್ಮವೆಂಬ ಸೋಜಿಗದ ವರೆಗೆ, ನಂಬಿಕೆಯಿಂದ ವಿಜ್ಞಾನದ ವರೆಗೆ, ಕಲೆಯಿಂದ ಕ್ರೀಡೆಯ ವರೆಗೆ, ಪರಂಪರೆಯಿಂದ ಪ್ರಯೋಗದ ವರೆಗೆ (ಇವನ್ನು ಹಿನ್ನಡೆಯ ಸಂದರ್ಭದಲ್ಲಿ ಅಪರಾಧದಿಂದ ಅಧಿಕಾರದ ವರೆಗೆ... ಪ್ರಯೋಗದಿಂದ ಪರಂಪರೆಯ ವರೆಗೆ... ಮುಂತಾದ ರೀತಿಯಲ್ಲಿ ಹಿಂದು-ಮುಂದಾಗಿ ಗ್ರಹಿಸಿದರೆ ಸರಿಯಾದೀತು) ಒಂದೇ ರೀತಿಯ ಹೆಜ್ಜೆ ಹಾಕುವುದು ಸೋಜಿಗ. ಒಳ ಹರಿವು ಬಹುಪಾಲು ಒಂದೇ ರೀತಿ ಇರುತ್ತದೆ. ಆದರೆ ಈ ಚರ್ಚೆಯನ್ನು ಕನ್ನಡ ಸಾಹಿತ್ಯಕ್ಕಷ್ಟೇ ಸೀಮಿತಗೊಳಿಸಿ ಇತರ ಆಸಕ್ತರಿಗೂ ಅನ್ಯಾಸಕ್ತರಿಗೂ ನಿರಾಶೆಯನ್ನುಂಟುಮಾಡುತ್ತಿದ್ದೇನೆ.

ಓದಲೇ ಬೇಕಾದ ಪುಸ್ತಕಗಳು ಯಾವುವು? ಅವು ಹೇಗಿರುತ್ತವೆ? ಹೇಗಿರಬೇಕು? ಇವುಗಳ ಬಗ್ಗೆ ನಿಖರವಾದ ಮಾಹಿತಿಯಿಲ್ಲ. ಇದನ್ನು ಬದುಕಿನ ವಿವಿಧ ಸ್ತರಗಳ ಆಧಾರದಲ್ಲಿ ಯೋಚಿಸಬಹುದು. ವಿದ್ಯಾರ್ಥಿಗಳ ಉದಾಹರಣೆಯನ್ನು ಹೇಳುವುದಾದರೆ ಉತ್ತೀರ್ಣನಾಗುವ ಬಯಕೆಯಿದ್ದವನಿಗೆ ಪಠ್ಯ ಪುಸ್ತಕಗಳು ಓದಲೇ ಬೇಕಾದ ಪುಸ್ತಕಗಳು. ನಕಲು ಹೊಡೆದು ಪಾಸಾಗುವವನಿಗೆ ಅದೂ ಅಗತ್ಯವಿಲ್ಲ. ಈಗೀಗ ಪಠ್ಯಗಳೂ ರಾಜಕಾರಣದ ಕಾಲಾಳುಗಳಾಗುತ್ತಿರುವುದರಿಂದ ಅವನ್ನು ಯಾವಾಗ ಓದಬೇಕು ಎಂಬ ಪ್ರಶ್ನೆ ಎದುರಾಗಬಹುದು. ಚುನಾವಣೆಗೆ ಮೊದಲು ಒಂದು ಪಠ್ಯವಿದ್ದರೆ ಚುನಾವಣಾ ಪರಿಣಾಮವನ್ನಾಧರಿಸಿ ಹೊಸ ಪಠ್ಯ ತಯಾರಾಗಬಹುದು. ಓದಿದ್ದನ್ನು ಮರೆಯಲೇಬೇಕೆಂದಿಲ್ಲ. ಅದು ಅವರವರ ಮರೆವಿನ ಸಾಮರ್ಥ್ಯವನ್ನವಲಂಬಿಸಿದೆ. ಆದರೆ ಎಳೆಯ ವಯಸ್ಸಿನಲ್ಲಿ ಕಲಿತದ್ದು ಸಾಮಾನ್ಯವಾಗಿ ಮರೆತುಹೋಗುವುದಿಲ್ಲ. ದಶಕಗಳ ನಂತರ ಭಾಷಣವೋ ಉಪನ್ಯಾಸವೋ ಮಾಡುವ ಮಂದಿ ನೆನಪಿಟ್ಟು ಹೇಳುವುದು ತಾವು ಚಿಕ್ಕಂದಿನಲ್ಲಿ ಕಲಿತ ಪಾಠದ ಎಳೆಯನ್ನೇ.

ಇಂದಿನ ಮಕ್ಕಳೇ ಮುಂದಿನ ಜನಾಂಗ ಎಂಬ ಸವೆದ, ಸುಕ್ಕುಗಟ್ಟಿದ ಮಾತಿಗೆ ಇಂದು ಅರ್ಥವಿಲ್ಲ. ಏಕೆಂದರೆ ನಮ್ಮ ಸುತ್ತಲಿನ ವಿದ್ಯಮಾನ ಹೇಗಿದೆಯೆಂದರೆ ಇಂದಿನ ಮಕ್ಕಳೇ ಮುಂದಿನ ರಾಜಕಾರಣಿಗಳು/ಪುಂಡರು/ ರೂಪದರ್ಶಿಗಳು ಎಂಬುದೇ ಹೆಚ್ಚು ವಾಸ್ತವವಾಗಿ ವಿಜ್ಞಾನಿಗಳು/ ಸಭ್ಯರು/ಸಂಭಾವಿತರು ಎಂದೆಲ್ಲ ಗುರುತಿಸುವುದು ವಿರಳವಾಗುತ್ತ ಹೋಗುತ್ತಿದೆ. ಆದ್ದರಿಂದ ಅವರು ಏನನ್ನು ಓದಬೇಕು, ಓದಲೇಬೇಕು ಎಂಬುದು ಅವರವರ ಹೆತ್ತವರ ಸಂಸ್ಕಾರ, ಹಿನ್ನೆಲೆ, ಜಾಯಮಾನ, ದೃಷ್ಟಿಕೋನ ಮತ್ತು ಆಶಯವನ್ನವಲಂಬಿಸಿದೆ. ಕೆಲವು ಮನೆಗಳಲ್ಲಿ ಮಕ್ಕಳು ಓದಬಲ್ಲ ನೀತಿಕೃತಿಗಳಿದ್ದರೆ ಇನ್ನು ಕೆಲವೆಡೆ ತೀರಾ ಮಡಿಯ ಮತ್ತು ಯಾರೂ ಓದದ ಹೊಗೆ, ಧೂಳು ಹಿಡಿದ ಧರ್ಮಗ್ರಂಥಗಳೆಂಬ ಬಿರುದಿನ ಪೂಜಾಗ್ರಂಥಗಳು ಮಾತ್ರವೇ ಇರುತ್ತವೆ. (ಇತರ ಮತಗಳಲ್ಲೂ ಹೀಗೇ ಇರುತ್ತವೆಂದು ನಂಬುತ್ತೇನೆ.) ಇನ್ನು ಹಲವೆಡೆ ‘ಶೋಕೇಸ್’ ಪುಸ್ತಕಗಳಾದ ಅಂತರ್‌ರಾಷ್ಟ್ರೀಯ ಮಟ್ಟದ ನ್ಯಾಷನಲ್ ಜಿಯಾಗ್ರಫಿಯಂತಹ ಸಂಚಿಕೆಗಳು ತುಂಬುತ್ತಿವೆ. ಇವುಗಳ ನಡುವೆ ಹಿಂದೆ ಚಂದಮಾಮ, ಬಾಲಮಿತ್ರದಂತಹ ಮಕ್ಕಳ ನಿಯತಕಾಲಿಕ ಪುಸ್ತಕಗಳಿದ್ದರೆ ಈಗ ಟಿಂಕಲ್‌ಗಳಿಂದ ತೊಡಗಿ ಹ್ಯಾರಿಪಾಟ್ಟರ್, ಲಾರ್ಡ್ ಆಫ್ ದಿ ರಿಂಗ್ಸ್ ಅಥವಾ ಬಿಲ್‌ಬ್ರೈಸನ್ ಬರೆದ ಶೀರ್ಷಿಕೆಗಳಂತಹ ಪುಸ್ತಕಗಳೇ ಬೀರುವನ್ನಲಂಕರಿಸುತ್ತವೆ. ಹೇಗೂ ಇರಲಿ, ಇವನ್ನು ಮಕ್ಕಳು ಓದಿದರೆ ಅವರಿಗೆ ಒಂದಿಷ್ಟು ಲೋಕಜ್ಞಾನವಂತೂ ಸಿಗುತ್ತದೆ. ಬುದ್ಧಿ ಮತ್ತು ವಿವೇಕದ ವಿಚಾರ ಬೇರೆ. ಅದಕ್ಕೆ ಹತ್ತು ಹಲವು ಇತರ ಪರಿಕರಗಳು ಬೇಕಾಗುತ್ತವೆ.

ಕಾಲೇಜು ಮತ್ತು ಅದಕ್ಕಿಂತ ಹೆಚ್ಚಿನ ಓದಿಗೆ ಬಂದಾಗ ವಿದ್ಯಾರ್ಥಿಗಳಿಗೆ ಸ್ವಂತ ವಿವೇಚನೆಯ ಅರಿವು ಇರುತ್ತದೆ ಅಥವಾ ಇರಬೇಕು. ಯಾರೇ ಯಾವುದನ್ನೇ ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಎಂದು ಹೇಳಿದರೂ ಅದನ್ನು ಸ್ವತಃ ಪರೀಕ್ಷಿಸಿ ನೋಡುವುದು ಒಳಿತು. ಅನೇಕರು ಇದನ್ನು ಮಾಡುತ್ತಾರೆ; ಮಾಡಬಲ್ಲರು. ಆದರೆ ನಮ್ಮ ವಿದ್ಯಾರ್ಥಿಗಳ ಗುರುಭಕ್ತಿ ಈ ಎಲ್ಲ ಸ್ವಂತಬುದ್ಧಿಗಿಂತ ಹೆಚ್ಚಾಗಿ ಬೆಳೆದು ಅನೇಕರು ತಮ್ಮ ವಿವೇಚನೆಯೆಂಬ ಹೆಬ್ಬೆರಳನ್ನು ಕಡಿದುಕೊಳ್ಳುತ್ತಾರೆ. ಆ ಮೇಲೆ ಗುರುಗಳ ಪಾಠವನ್ನು ನಿಷ್ಠೆಯಿಂದ ಒಪ್ಪಿಕೊಳ್ಳುವುದು ಮತ್ತು ಒಪ್ಪಿಸುವುದಲ್ಲದೆ ಬರಹಗಾರ ಗುರುಗಳ ಕೃತಿಗಳ ಮಾರಾಟ, ಹೊಗಳಿಕೆ ಮಾತ್ರವಲ್ಲ ಆರಾಧನಾಭಾವದಿಂದ ಅವರ ಏಜೆಂಟರಂತೆ ಪ್ರಚಾರಕಾರ್ಯವನ್ನೂ ಮಾಡುವುದುಂಟು. ಈಗೀಗ ಸಾಹಿತ್ಯ ಗುರುಗಳ ಕೃತಿಯನ್ನು ವಿಮರ್ಶಿಸುವುದಕ್ಕಿಂತ ಹೆಚ್ಚಾಗಿ ಅವರ ಹುಟ್ಟುಹಬ್ಬ ಮತ್ತು ಅವರ ಅಭಿನಂದನಾ ಗ್ರಂಥಗಳನ್ನು ಸಂಪಾದಿಸುವ ದುಡಿಮೆಯಲ್ಲೇ ಹಲವರಿದ್ದಾರೆ.

ಈ ಅಕಾಡಮಿಕ್ ಪ್ರಪಂಚದಲ್ಲಿ ವಿದ್ಯಾಕೇಂದ್ರಗಳಷ್ಟೇ ಇಂತಹ ವಾತಾವರಣವನ್ನು ಸೃಷ್ಟಿಸಿದ್ದಲ್ಲ. ಇತರ ಅನೇಕ ಬರಹಗಾರರು ಇಂತಹ ಪರಸ್ಪರ ಅಧಿಕ ಸಾಮರಸ್ಯದ ಭಾವವನ್ನು ಸೃಷ್ಟಿಸಿಕೊಂಡದ್ದಿದೆ. ಇವರ ಪುಸ್ತಕವನ್ನು ಅವರು ಹೊಗಳಿದರೆ ಅದಕ್ಕೆ ಪ್ರತೀಕಾರವೆಂಬಂತೆ ಅವರ ಪುಸ್ತಕವನ್ನು ಇವರು ಹೊಗಳುತ್ತಾರೆ. ಈ ಪುಸ್ತಕ ಕನ್ನಡ ಸಾಹಿತ್ಯದಲ್ಲೊಂದು ಮೈಲಿಗಲ್ಲು ಎಂಬ ಮಾತುಗಳು ಕ್ಷೀಶೆಯಾಗಿವೆ; ಎಷ್ಟೆಂದರೆ ಅಂತಹ ಮೈಲಿಗಲ್ಲುಗಳು ಫರ್ಲಾಂಗಿಗೊಂದು ಸೃಷ್ಟಿಯಾಗಿವೆ. ಪುಸ್ತಕ ಬಿಡುಗಡೆಗೆ ಮುನ್ನವೇ ಕೃತಿಯೊಂದರ ಹೈಲೈಟ್ಸ್ ಪ್ರಕಟವಾಗಿ ಅದು ಯಾಕೆ ಕನ್ನಡದ ಒಂದು ಅನನ್ಯ ಕೃತಿಯೆಂಬ ವಾದವು ವಿಮರ್ಶೆಯ ಹೆಸರಿನಲ್ಲಿ ಪ್ರಕಟವಾಗುತ್ತದೆ. ಹಾಗೆ ನೋಡಿದರೆ ಕೃತಿಚೌರ್ಯವಾಗದ ಎಲ್ಲ ಕೃತಿಗಳೂ ಅನನ್ಯವೇ. ಯಾವುದೋ ಒಂದು ಕೃತಿಯು ಈಗಾಗಲೇ ಪ್ರಕಟವಾದ ಇನ್ನೊಂದು ಕೃತಿಯ ಛಾಯೆಯನ್ನು ಹೊಂದಿದೆಯೆಂಬ ಸಂಶಯ ಬಂದರೆ ಅದಕ್ಕೂ Great Men think alike ಎಂಬ ಸಮರ್ಥನೆಯಿದೆ. ಇಲ್ಲವೇ ದಯಾಳು ವಿಮರ್ಶಕರು ಯಾವುದೇ ಕೃತಿಯ ಮೇಲೆ ಇನ್ನೊಂದು ಕೃತಿಯ ಪ್ರಭಾವವಿರುವುದು ತಪ್ಪಲ್ಲ, ಹಾಗೆ ನೋಡುತ್ತ ಹೋದರೆ ಬಹುಪಾಲು ಕೃತಿಗಳು ಇದೇ ಕಾರಣಕ್ಕೆ ಮನ್ನಣೆಯಿಂದ ವಂಚಿತವಾಗುತ್ತವೆ; ಇವರು ಅದನ್ನು ಓದಿರಲಿಕ್ಕಿಲ್ಲ, ಓದಿದರೂ ಅದನ್ನು ಮುಖಾಮುಖಿಯಾಗಿಸಿ ಬದುಕನ್ನು ಇನ್ನೊಂದು ಕೋನದಿಂದ ನೋಡಿದ್ದಾರೆ ಎಂದು ಮುಂತಾಗಿ ಸಮಜಾಯಿಷಿಕೆ ನೀಡಿ ಬದುಕಿಸುತ್ತಾರೆ.

ಇನ್ನು ಕೆಲವು ಕೃತಿಗಳಿಗೆ ಒಂದು, ಎರಡು, ಮೂರು ಮಡಿ ಮುನ್ನುಡಿಗಳು. ಇವನ್ನು ಕೃತಿಯನ್ನೋದುವ ಮೊದಲು ಓದಿದರೆ ಏನೂ ಅರ್ಥವಾಗದು. ಮಾತ್ರವಲ್ಲ ಕೃತಿಯನ್ನು ಓದಲು ಭಯವಾಗಬಹುದು. ವಿಶೇಷ ಪರಿಭಾಷೆ, ಸಂಕೀರ್ಣ ಮತ್ತು ಅಸಂಗತ ನೋಟಗಳ ಸಿಕ್ಸರ್‌ನಿಂದ ಅವರು ಕೃತಿಯ ಓದನ್ನು ಎತ್ತೆತ್ತಲೋ ಸಾಗಿಸಿ ಓದುಗನನ್ನು ಕೃತಿಯಿಂದ ದೂರ ಓಡಿಸುತ್ತಾರೆ. ಹೀಗಾಗಿ ನಾನು ಯಾವುದೇ ಕೃತಿಯನ್ನು ಓದುವ ಮುನ್ನ ಅದರ ಮುನ್ನುಡಿ, ಬ್ಲರ್ಬ್ ಇವನ್ನು ದಾಟಿಯೇ ಓದನ್ನು ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾಃ ಎಂಬ ಹಾಗೆ ಉದ್ಗರಿಸುತ್ತೇನೆ. ಮುನ್ನುಡಿಯನ್ನು/ಗಳನ್ನು ಓದಿದರೆ ಯಾವ ಕೃತಿಯಲ್ಲೂ ದೋಷವಿರದು. ಅದು ಕನ್ನಡಕ್ಕೆ ಕೊಟ್ಟ ವಿನೂತನ ಕೊಡುಗೆ. ಬರೆದವರು ಎಳೆಯರಾದರೆ ಮತ್ತು ಮುನ್ನುಡಿಕಾರರು ಹಿರಿಯರಾದರೆ ಆ ಲೇಖಕ ಭರವಸೆ ಮೂಡಿಸುವ ಬರಹಗಾರ.

ಇವನ್ನೆಲ್ಲ ದಾಟಿ ಮಾಧ್ಯಮಗಳಲ್ಲಿ ಬರುವ ವಿಮರ್ಶೆಗಳನ್ನು ನೋಡಿದರೆ ಅವು ಲೇಖಕರ ಕುರಿತ ನಿಷ್ಠೆ, ಪ್ರೀತಿ, ಓಲೈಕೆ ಹಾಗೂ ಅವುಗಳು ಮಾರಾಟವಾಗಬೇಕಾದ ಅಗತ್ಯದ ತೀವ್ರತೆ ಇವುಗಳನ್ನು ಅನಾವರಣಗೊಳಿಸುತ್ತವೆ. ದೋಷವನ್ನು ಗುರುತಿಸಬೇಕಾದಾಗಲೂ ಇದರರ್ಥ ಅದು ಕೆಟ್ಟ ಕೃತಿಯೆಂದೇನಲ್ಲ ಎಂಬಂತಹ ಬೇಲಿಯ ಮೇಲಣ ಅಭಿವ್ಯಕ್ತಿಯಿರುತ್ತದೆ. ಪರಿಚಯವೇ ಇಲ್ಲದ ಬರಹಗಾರರಾದಾಗ ಮಾತ್ರ ವಿಮರ್ಶಕನು ಸಾಹಿತ್ಯದ ಎಲ್ಲ ನಿಷ್ಠುರ ಪರಿಭಾಷೆಯನ್ನು ಬಳಸುವುದನ್ನು ಕಾಣಬಹುದು. ಚಲನಚಿತ್ರಗಳ ಹಾಗೆ ಮನೆಮಂದಿಯೆಲ್ಲ ಓದಬೇಕಾದ ಪುಸ್ತಕ ಎಂಬ ಸಾಹಿತ್ಯ ವಿಮರ್ಶೆ ಇನ್ನೂ ಬಂದಿಲ್ಲ. ಇದು ಪ್ರಶಸ್ತಿ ಪಡೆಯಲೇ ಬೇಕಾದ ಕೃತಿ ಎಂದು ಒಬ್ಬರು ಬರೆದಿದ್ದರು. ಅಂದರೆ ಅವರೇ ಆ ಕೃತಿಗೆ ಪ್ರಶಸ್ತಿ ನೀಡಿದ ಹಾಗಾಯಿತು. ಅವರ ಜೊತೆಯವರೇ ತೀರ್ಪುಗಾರರಾದರಂತೂ ಪ್ರಶಸ್ತಿ ಖಚಿತ. ಹೀಗೆ ಅಧಿಕೃತ ಪ್ರಶಸ್ತಿಗಿಂತ ಮೊದಲೇ ವಿಮರ್ಶಾ ಪ್ರಶಸ್ತಿ ಬಂದ ಕೃತಿಗಳು ಹಲವಿವೆ. ಇದನ್ನು ಬಲ್ಲ ಲೇಖಕರು ವಿಮರ್ಶಕರಿಗೂ ಪ್ರಶಸ್ತಿ ಸಮಿತಿ/ಮಂಡಳಿಯ ಪದಾಧಿಕಾರಿಗಳಿಗೆ ತಮ್ಮ ಕೃತಿಯ ಪ್ರತಿಗಳನ್ನು ವಿಶ್ವಾಸಪೂರ್ವಕವೋ, ಗೌರವಪೂರ್ವಕವೋ ಕಳುಹಿಸುತ್ತಾರೆ. ಯಾರೂ ಪ್ರಶಸ್ತಿಯ ಅಪೇಕ್ಷೆಯಿಂದ ಎಂದು ಕಳಿಸಿದ್ದಿಲ್ಲ. ಹೀಗೆ ಕಳುಹಿಸಿದವರೇ ಪ್ರಶಸ್ತಿ ಬಂದಾಗ ತನಗಿದು ಅನಿರೀಕ್ಷಿತ ಎಂದು ಅತ್ತದ್ದಿದೆ. ಅದನ್ನು ಪ್ರಶಸ್ತಿಗೆ ಆರಿಸಿದವರಾದರೂ ಓದಿದ್ದರೇ ಎಂಬುದು ಖಾತ್ರಿಯಿಲ್ಲ! ಹೀಗೆ ಪ್ರಶಸ್ತಿ ಗಳಿಸಿದರೆ ಇರುವ ಲಾಭವೆಂದರೆ ಅದು ಓದಲೇಬೇಕಾದ ಕೃತಿಯಾಗುತ್ತದೆ. ಹಿಂದೊಂದು ಕಾಲವಿತ್ತು: ಯಾವುದೋ ಪ್ರಶಸ್ತಿ ಬಂದರೆ ಅದನ್ನು ಕೃತಿಯಲ್ಲಿ ಮುದ್ರಿಸಿದರೆ ಗೌರವಪೂರ್ವಕವಾಗಿ ಜನರು ಸ್ವೀಕರಿಸಿ ಓದುತ್ತಿದ್ದರು. ಈಗ ಪ್ರಶಸ್ತಿ ವಿಜೇತ ಕೃತಿಯನ್ನು ಸಂಶಯದೊಂದಿಗೇ ಓದುತ್ತಾರೆ. ಕಾಲ ಬದಲಾಗಿದೆ; ಬರಹಗಾರರ ಪಾಲಿಗೆ ಕಾಲ ಕೆಟ್ಟಿದೆ!

ನನ್ನ ಕಾಲೇಜು ಸಹಪಾಠಿಯೊಬ್ಬ ನನ್ನೊಂದಿಗೆ ಪರಸ್ಪರ ಕಾಲೆಳೆದುಕೊಂಡೇ ಓದಿದವನು. ಯಾವುದೋ ಒಂದು ಸಿನೆಮಾ ಬಂದಿತ್ತು. ನೋಡಿದ. ನಾನು ಊರಲ್ಲಿರಲಿಲ್ಲ; ಬಂದ ಮೇಲೆ ಹೇಗಿದೆಯೆಂದು ಕೇಳಿದೆ. ಫರ್ಸ್ಟ್ ಕ್ಲಾಸ್; ‘‘ನೀನು ನೋಡಲೇಬೇಕಾದ ಸಿನೆಮಾ’’ ಎಂದ. ನಾನು ಅದೇ ದಿನ ಹೋಗಿ ನೋಡಿದೆ. ಅದು ಫರ್ಸ್ಟ್, ಸೆಕೆಂಡ್ ಕೂಡಾ ಅಲ್ಲ; ಥರ್ಡ್ ಕ್ಲಾಸ್! ನಾಲ್ಕನೇ ದರ್ಜೆ ಎಂದರೆ ನನಗೆ ಗೊತ್ತಿಲ್ಲವಾದ್ದರಿಂದ ಥರ್ಡ್ ಕ್ಲಾಸ್! ಮರುದಿನ ಅವನನ್ನು ಜೋರಾಗಿಯೇ ಕೇಳಿದೆ: ‘‘ಅಲ್ಲೋ ಮಾರಾಯ, ನನಗೆ ಹೀಗೆ ಸುಳ್ಳು ಹೇಳುವುದಾ ನೀನು?’’ ಅದಕ್ಕವನು ‘‘ಟಿಕೆಟು ತೆಕ್ಕೊಂಡು ನನ್ನ ಹೊಟ್ಟೆ ಸುಡಲಿಲ್ಲವಾ ನಿನಗೂ ಇರಲಿ ಅದರ ಬೇಗೆ ಅಂತ ಹೇಳಿದೆ’’ ಎಂದ. ಆ ಮೇಲೆ ಪರಸ್ಪರ ಕಾಲೆಳೆಯುವ ಪ್ರವೃತ್ತಿ ನೆನಪಾಗಿ ಸುಮ್ಮನಾದೆ. ಪುಸ್ತಕಗಳನ್ನು ಹೀಗೆ ಖರೀದಿ ಮಾಡಿಸುತ್ತಾರೋ ಗೊತ್ತಿಲ್ಲ. ಆದರೆ ಕೆಲವು ಕೃತಿಗಳ ಬಗ್ಗೆಯಂತೂ ಇಂತಹ ಹೊಗಳಿಕೆ ನೋಡಿದ ಬಳಿಕ ಖರೀದಿಸುವ ಮೊದಲು ಜಾಗ್ರತೆಯಿಂದ ಹೆಜ್ಜೆಯಿಡಲು ಕಲಿತಿದ್ದೇನೆ. ಹಾದಿಬದಿಯಲ್ಲಿರುವ ಹಾವಿಗೆ ವಿಷವಿದೆಯೋ ಇಲ್ಲವೊ ಎಂದು ನೋಡಬೇಕಲ್ಲ! ಹಾಗೆಯೇ ಈ ಕೃತಿ ನನ್ನದಾಗಬಹುದೇ ಎಂದು ಯೋಚಿಸಿ ಅಳೆದೂ ಸುರಿದೂ ಆನಂತರ ಖರೀದಿಯ ವಿಚಾರ. ಆದರೂ ಸಿಕ್ಕಿಬಿದ್ದದ್ದಿದೆ. ಒಂದು ಬಾರಿಯಂತೂ ಯಾವುದೋ ಪುಸ್ತಕ ಬಿಡುಗಡೆಯ ಸಂದರ್ಭ; ಅದರ ಕುರಿತ ವೇದಿಕೆಯ ಮಾತನ್ನು ಕೇಳಿ ಎಲ್ಲರೂ ಕೊಂಡುಕೊಳ್ಳುವವರೇ. ನಾನೂ ಕೊಂಡುಕೊಂಡೆ. ಹಣಕೊಟ್ಟದ್ದರಿಂದ ಮರಳಿಸುವ ಪ್ರಮೇಯವಿರಲಿಲ್ಲ. ಉಚಿತ ಸಿಕ್ಕಿದ್ದರೆ ಅವರಿಗೆ ಮರಳಿಸುತ್ತಿದ್ದೆ; ಅಥವಾ ಯಾರಿಗಾದರೂ ಉಚಿತವಾಗಿ ನೀಡುತ್ತಿದ್ದೆ. ಅದರ ಬೇಗೆ, ಬೇನೆ ಇನ್ನೂ ಕಡಿಮೆಯಾಗಿಲ್ಲ. ನಮಗೆ ರುಚಿಸಿದರೆ ಚೆನ್ನಾಗಿದೆ ಎನ್ನೋಣ. ನಮಗೆ ಇಷ್ಟವಾದರೆ ನೀವೂ ಓದಿ ಎನ್ನೋಣ. ಆದರೆ ರನ್ನಪ್ರಶಸ್ತಿಯೆಂಬಂತೆ ಅದಕ್ಕೆ ತಳಿರುತೋರಣದಿಂದ ಶೃಂಗರಿಸಿ ನೀವಿದನ್ನು ಕೊಳ್ಳಲೇಬೇಕು ಎಂದು ನಂಬಿಸಿದರೆ ನಿಮ್ಮನ್ನು ಇನ್ನೊಮ್ಮೆ ನಂಬುವುದು ಹೇಗೆ?

ಅವರವರ ಆಸಕ್ತಿ ಅವರವರಿಗೆ. ಕ್ಷೇತ್ರಾವಾರು ಬುದ್ಧಿವಂತರಿರುತ್ತಾರೆ. ಒಂದು ಕ್ರೀಡೆಯ ಆಟಗಾರನಿಗೆ ಇತರ ಕ್ರೀಡೆಯ ಆಟದ ಆಸಕ್ತಿಯಿಲ್ಲದಿರಬಹುದು. ಅವನನ್ನು ನೀನು ಇದನ್ನು ನೋಡಲೇಬೇಕು, ಆಡಲೇಬೇಕು ಎಂದರೆ ಅವನು ಸರಳವಾಗಿ mind your business ಎನ್ನಬಹುದು. ಆ ಎಚ್ಚರಿಕೆ ನಮಗೆ ಬೇಕು. ಆಗ ಯಾವುದೂ ಓದಲೇಬೇಕಾಗಿ ಬರುವುದಿಲ್ಲ. ಇಷ್ಟವಾದರೆ, ಬೇಕಾದರೆ ಓದಿ; ಇಲ್ಲವೇ ಬಿಡಿ. ಲೋಕವೇನೂ ಮುಳುಗಿ ಹೋಗುವುದಿಲ್ಲ

Similar News