ನರೇಂದ್ರ ಮೋದಿ ಶೈಕ್ಷಣಿಕ ಪದವಿ ಬಗ್ಗೆ ಹೇಳಿಕೆ: ಅರವಿಂದ ಕೇಜ್ರಿವಾಲ್‌ಗೆ ಗುಜರಾತ್ ನ್ಯಾಯಾಲಯ ಸಮನ್ಸ್

Update: 2023-06-08 08:11 GMT

ಹೊಸದಿಲ್ಲಿ: ಕ್ರಿಮಿನಲ್ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ  ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಅವರಿಗೆ ಜುಲೈ 13 ರಂದು ಹಾಜರಾಗುವಂತೆ ಗುಜರಾತ್ ನ್ಯಾಯಾಲಯ ಬುಧವಾರ ಆದೇಶಿಸಿದೆ ಎಂದು ಪಿಟಿಐ ವರದಿ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಪದವಿ ಬಗ್ಗೆ ಕೇಜ್ರಿವಾಲ್ ಹಾಗೂ  ಸಿಂಗ್ ಅವರು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಗುಜರಾತ್ ವಿಶ್ವವಿದ್ಯಾಲಯವು ಪ್ರಕರಣ ದಾಖಲಿಸಿದೆ.

ಪ್ರಾಥಮಿಕ ಅವಲೋಕನದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 500 ರ ಅಡಿಯಲ್ಲಿ ಇಬ್ಬರು ಆಮ್ ಆದ್ಮಿ ಪಕ್ಷದ ನಾಯಕರ ವಿರುದ್ಧ ಮಾನನಷ್ಟ ಶಿಕ್ಷೆಗೆ ಸಂಬಂಧಿಸಿದಂತೆ ಪ್ರಕರಣವಿರುವುದು ಕಂಡುಬಂದಿದೆ ಎಂದು ನ್ಯಾಯಾಲಯ ಹೇಳಿದೆ ಎನ್ನುವುದಾಗಿ Hindustan Times ವರದಿ ಮಾಡಿದೆ.

ಆರೋಪಿಗಳಿಬ್ಬರ (ಕೇಜ್ರಿವಾಲ್ ಹಾಗೂ  ಸಿಂಗ್) ಪರ ವಕೀಲರು ಇಂದು ನ್ಯಾಯಾಲಯಕ್ಕೆ ಹಾಜರಾಗಿ ನ್ಯಾಯಾಲಯದ ದಾಖಲೆಗಳನ್ನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯವು ಅವರಿಗೆ ದಾಖಲೆಗಳನ್ನು ಒದಗಿಸಿದೆ ... ಅವರು ಇಂದು ನ್ಯಾಯಾಲಯಕ್ಕೆ ಹಾಜರಾಗುವುದರಿಂದ ವಿನಾಯಿತಿಗಾಗಿ ಅರ್ಜಿಯನ್ನು ಸಲ್ಲಿಸಿದರು ಎಂದು ಗುಜರಾತ್ ವಿಶ್ವವಿದ್ಯಾಲಯದ ವಕೀಲ ಅಮಿತ್ ನಾಯರ್ ಹೇಳಿದ್ದಾರೆ.

ನ್ಯಾಯಾಲಯವು ವಿನಾಯಿತಿಗಾಗಿ ಅವರ ಅರ್ಜಿಯನ್ನು ಸ್ವೀಕರಿಸಿತು, ಆದರೆ ಅವರು ಯಾವಾಗ ನ್ಯಾಯಾಲಯದ ಮುಂದೆ ಹಾಜರಾಗಬಹುದು ಎಂದು ಕೇಳಿದೆ. ಜುಲೈ 13 ರಂದು ತಮ್ಮ ಕಕ್ಷಿದಾರರು ಹಾಜರಿರುತ್ತಾರೆ ಎಂದು ಆಮ್ ಆದ್ಮಿ ಪಕ್ಷದ ನಾಯಕರ ಪರ ವಕೀಲರು ತಿಳಿಸಿದ್ದಾರೆ.

ಕೇಜ್ರಿವಾಲ್ ಗೆ ಮೋದಿ ಅವರ ಶೈಕ್ಷಣಿಕ ಅರ್ಹತೆಯ ವಿವರಗಳನ್ನು ಒದಗಿಸುವಂತೆ ಕೇಂದ್ರ ಮಾಹಿತಿ ಆಯೋಗವು ಗುಜರಾತ್ ವಿಶ್ವವಿದ್ಯಾಲಯಕ್ಕೆ 2016ರಲ್ಲಿ ನೀಡಿರುವ ಆದೇಶವನ್ನು ಗುಜರಾತ್ ಹೈಕೋರ್ಟ್ ರದ್ದುಪಡಿಸಿದ 2 ತಿಂಗಳ ನಂತರ ಕೇಜ್ರಿವಾಲ್ ಹಾಗೂ ಸಿಂಗ್ ಹೇಳಿಕೆಯ ಕುರಿತಂತೆ ಮಾನನಷ್ಟ ಕೇಸ್ ದಾಖಲಿಸಲಾಗಿತ್ತು.

Similar News