ಲಗಾನ್‌ ಚಿತ್ರದ 'ಕಚ್ರಾ' ಪಾತ್ರವನ್ನು ಜಾಹಿರಾತಿಗೆ ಬಳಸಿ ವಿವಾದಕ್ಕೀಡಾದ ಝೊಮ್ಯಾಟೋ

ಬಹಿಷ್ಕಾರದ ಅಭಿಯಾನದ ಬೆನ್ನಲ್ಲೇ ಕ್ಷಮೆ ಕೋರಿ ಜಾಹಿರಾತನ್ನು ಹಿಂಪಡೆದ ಸಂಸ್ಥೆ

Update: 2023-06-08 13:41 GMT

ಹೊಸದಿಲ್ಲಿ: ಆಹಾರ ವಿತರಣಾ ಸಂಸ್ಥೆ ಝೊಮ್ಯಾಟೋ ಮತ್ತೆ ವಿವಾದದಲ್ಲಿ ಸಿಕ್ಕಿ ಬಿದ್ದಿದೆ. ಪರಿಸರ ಸಂರಕ್ಷಣೆ ಅಭಿಯಾನದ ಭಾಗವಾಗಿ ಝೊಮ್ಯಾಟೋ ಮಾಡಿರುವ ಜಾಹಿರಾತಿನಲ್ಲಿ ಜಾತಿ ಅಸೂಕ್ಷ್ಮತೆಯನ್ನು ಹೊಂದಿದೆ ಎಂಬ ಆರೋಪ ಕೇಳಿ ಬಂದಿದೆ.

'Don’t waste food, Don’t’ be Kachraʼ ( ಆಹಾರ ಪೋಲು ಮಾಡಬೇಡಿ, ಕಚ್ರಾನಂತೆ ಆಗಬೇಡಿ) ಎಂಬ ಟ್ಯಾಗ್‌ಲೈನ್‌ ಝೊಮ್ಯಾಟೋ ವಿರುದ್ಧ ನೆಟ್ಟಿಗರ ಕೆಂಗಣ್ಣು ಬೀರುವಂತೆ ಮಾಡಿದೆ. 

ಶುಚಿತ್ವವನ್ನು ಉತ್ತೇಜಿಸುವ ಮತ್ತು ಆಹಾರ ತ್ಯಾಜ್ಯವನ್ನು ಕಡಿಮೆ ಮಾಡುವ ಅಭಿಯಾನದ ಭಾಗವಾಗಿ ಝೊಮ್ಯಾಟೋ ಜಾಹಿರಾತು ನಿರ್ಮಿಸಿದ್ದು, ಈ ಜಾಹಿರಾತುಗಳಲ್ಲಿ ವಿವಾದಾತ್ಮಕ ಟ್ಯಾಗ್‌ಲೈನ್‌ ಅನ್ನು ಬಳಸಲಾಗಿತ್ತು. 

ವಿಶ್ವ ಪರಿಸರ ದಿನದಂದು ಜೂನ್ 5 ರಂದು ಬಿಡುಗಡೆಯಾದ ಈ ಜಾಹಿರಾತಿನಲ್ಲಿ ಪರಿಸರದ ಮೇಲೆ ಪ್ಲಾಸ್ಟಿಕ್ ತ್ಯಾಜ್ಯ ಬೀರುವ ಹೊರೆಯ ಬಗ್ಗೆ ಜಾಗೃತಿ ಮೂಡಿಸಲು ಮಾಡಲಾಗಿತ್ತು ಎಂದು ಸಂಸ್ಥೆಯು ಸ್ಪಷ್ಟೀಕರಣ ನೀಡಿದೆ. 

2001 ರಲ್ಲಿ ಬಿಡುಗಡೆಯಾದ ಲಗಾನ್ ಚಿತ್ರದ ಕಚ್ರಾ (ಕಸ) ಎಂಬ ಅಸ್ಪರ್ಶ್ಯ ಪಾತ್ರವನ್ನು ಜಾಹಿರಾತಿಗಾಗಿ ಝೊಮ್ಯಾಟೋ ಮರು ನಿರ್ಮಿಸಿದೆ. ಲಗಾನ್ ಚಿತ್ರದಲ್ಲಿ ಕಚ್ರಾ ಪಾತ್ರವನ್ನು ನಿರ್ವಹಿಸಿದ ನಟ ಆದಿತ್ಯ ಲಖಿಯಾ ಅವರೇ ಜಾಹಿರಾತಿನಲ್ಲೂ ಕಾಣಿಸಿಕೊಂಡಿದ್ದಾರೆ.  

ಲಗಾನ್‌ ಚಿತ್ರದಲ್ಲಿ ಬಂದ ಕಚ್ರಾ ಪಾತ್ರವು ಸಿನೆಮಾ ಇತಿಹಾಸದಲ್ಲೇ ದಮನಿತ ಸಮುದಾಯದ ಪಾತ್ರವೊಂದನ್ನು ಅತ್ಯಂತ ನಿಕೃಷ್ಟವಾಗಿ ತೋರಿಸಿದ ಪಾತ್ರವಾಗಿತ್ತು. ಅದನ್ನೇ ಬಳಸುವ ಮೂಲಕ ಜಾತಿಯನ್ನು ವಾಣಿಜ್ಯೀಕರಣಗೊಳಿಸಿದೆ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ಝೊಮ್ಯಾಟೋವನ್ನು ಬಹಿಷ್ಕರಿಸಿ ಎಂದು ಟ್ವಿಟರ್‌ ಬಳಕೆದಾರರು ಅಭಿಯಾನ ಶುರು ಮಾಡಿದ್ದು, ತಕ್ಷಣ ಎಚ್ಚೆತ್ತ ಝೊಮ್ಯಾಟೋ ತನ್ನ ಜಾಹಿರಾತನ್ನು ಹಿಂಪಡೆದುಕೊಂಡಿದೆ. ಮಾತ್ರವಲ್ಲ ನಿರ್ದಿಷ್ಟ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿರುವುದಕ್ಕೆ ಕ್ಷಮೆಯನ್ನೂ ಕೋರಿದೆ.

Similar News