ಇಂದಿನ ತಲ್ಲಣಗಳಿಗೆ ಕುವೆಂಪು ಸಾಹಿತ್ಯದಲ್ಲಿ ಪರಿಹಾರ: ಡಾ.ಸುಧಾಕರ

ಕುವೆಂಪು ವಿಶೇಷ ಉಪನ್ಯಾಸ ಮಾಲೆ

Update: 2023-06-08 13:45 GMT

ಉಡುಪಿ, ಜೂ.8: ನಮ್ಮ ಕಾಲದ ಅನೇಕ ತಲ್ಲಣಗಳಿಗೆ ಕುವೆಂಪು ಅವರ ಸಾಹಿತ್ಯದಲ್ಲಿ, ಅವರ ಬದುಕಿನಲ್ಲಿ ಪರಿಹಾರವಿದೆ ಎಂದು ಸಾಹಿತ್ಯ ವಿಮರ್ಶಕ ಹಾಗೂ ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ  ಡಾ.ಸುಧಾಕರ ದೇವಾಡಿಗ ಬಿ. ಹೇಳಿದ್ದಾರೆ.

ಉಜಿರೆಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ (ಸ್ವಾಯತ್ತ) ಕನ್ನಡ ವಿಭಾಗ ಹಾಗೂ ಕುಪ್ಪಳ್ಳಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನವು ಉಡುಪಿಯ ಎಂಜಿಎಂ ಸಂಧ್ಯಾ ಕಾಲೇಜಿನ ಸಹಯೋಗದಲ್ಲಿ ಇಂದು ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಆಯೋಜಿಸಿದ್ದ ಕುವೆಂಪು ಕುರಿತ ವಿಶೇಷೋಪನ್ಯಾಸ ಮಾಲೆಯಲ್ಲಿ ‘ಹೊಸ ತಲೆಮಾರಿಗೆ ಕುವೆಂಪು ಸಾಹಿತ್ಯ ದರ್ಶನ’ ಎಂಬ ವಿಷಯದ ಮೇಲೆ ಮಾತನಾಡುತಿದ್ದರು.

ಕುವೆಂಪು ಪ್ರಕೃತಿ ಕವಿ ಎಂದೇ ಹೆಸರಾದವರು. ಪ್ರಕೃತಿ ದೇವರ ಇರುವಿಕೆಯ ರೂಪ ಎಂದು ನಂಬಿದವರು. ಪ್ರಕೃತಿಯಲ್ಲಿ ದೇವರನ್ನು ಕಂಡವರು. ‘ದೇವರು ರುಜುಮಾಡಿದ’ ಎಂಬುದು ಅವರ ಪ್ರಸಿದ್ಧ ಕವನಗಳಲ್ಲೊಂದು. ಕುವೆಂಪು ಅವರ ಸಾಹಿತ್ಯ ಪ್ರಕೃತಿಯ ಮಹತ್ವವನ್ನು ನಮಗೆ ಮನದಟ್ಟು ಮಾಡುತ್ತವೆ. ಹೀಗಾಗಿ ಇಂದಿನ ಎಲ್ಲಾ ತಲ್ಲಣಗಳಿಗೆ ಪ್ರಕೃತಿ ನಾಶವೇ ಕಾರಣ ಎಂಬುದು ಅರಿವಿಗೆ ಬರುತ್ತದೆ ಎಂದು ಡಾ.ದೇವಾಡಿಗ ವಿವರಿಸಿದರು.

ಮೌಢ್ಯದ ವಿರುದ್ಧ ಹೋರಾಟ: ಪ್ರಕೃತಿಯೊಂದಿಗೆ ಕುವೆಂಪು ಅವರು ಜೀವನ ಹಾಗೂ ಸಾಹಿತ್ಯದ ಮೂಲಕ ಮಾಡಿದ ಮತ್ತೊಂದು ಹೋರಾಟ ಮೌಢ್ಯದ ವಿರುದ್ಧ. ಮಾನವನ ಭೌತಿಕ ವಿಕಾಸಕ್ಕೆ ತೊಡಕಾಗುವುದೇ ಮೌಢ್ಯ ಎಂದು ಅರಿತಿದ್ದ ಕುವೆಂಪು ಮೌಡ್ಯದ ವಿರುದ್ಧ ಪ್ರಹಾರ ಮಾಡಿಕೊಂಡೇ ಬಂದವರು ಎಂದು ಅವರು ನುಡಿದರು.

ಕುವೆಂಪು ಧಾರ್ಮಿಕತೆಯ ಹೆಸರಿನಲ್ಲಿ ಕಂಡುಬರುವ ಮೌಢ್ಯವನ್ನು ಸಂಪೂರ್ಣವಾಗಿ ನಿರಾಕರಿಸುತ್ತಾರೆ. ನಾಸ್ತಿಕರಲ್ಲವಾದರೂ ಅವರು ಮೌಢ್ಯ ವನ್ನು ಮಾತ್ರ ವಿರೋಧಿಸಿಕೊಂಡೇ ಬಂದವರು. ಸಮಾಜದಲ್ಲಿ ಬೇರು ಬಿಟ್ಟಿದ್ದ ಎಲ್ಲಾ ಮೌಢ್ಯಗಳನ್ನು ತಮ್ಮ ಕಾದಂಬರಿಗಳಲ್ಲಿ ಪ್ರಸ್ತಾಪಿಸುವ ಕುವೆಂಪು ಅದನ್ನು ಮೀರುವಂತೆ ಕರೆ ನೀಡುತ್ತಾರೆ ಎಂದರು.

ಮೌಢ್ಯವನ್ನು ತಳ್ಳಿಹಾಕುವ ಕುವೆಂಪು, ‘ವಿಜ್ಞಾನದ ದೀವಿಗೆ’ಯನ್ನು ಹಿಡಿದು ಬನ್ನಿ ಎಂದು ತನ್ನ ಪ್ರಸಿದ್ಧ ಕವನದಲ್ಲಿ ನೇರವಾಗಿ ಕರೆ ನೀಡುತ್ತಾರೆ. ವೈಚಾರಿಕ ಪ್ರಜ್ಞೆ ನಮ್ಮೊಳಗೆ ಮೂಡಬೇಕೆಂದು ತಮ್ಮ ಸಾಹಿತ್ಯದುದ್ದಕ್ಕೂ ಕುವೆಂಪು ಪ್ರತಿಪಾದನೆ ಮಾಡಿಕೊಂಡು ಬಂದಿದ್ದಾರೆ. ‘ನಿರಂಕುಶಮತಿಗಳಾಗಿ’ ಎಂಬುದು ಕುವೆಂಪು ಯುವಕರಿಗೆ ನೀಡುವ ಮತ್ತೊಂದು ಸಂದೇಶವಾಗಿದೆ ಎಂದರು.

ವಿಶ್ವಮಾನವ ಸಂದೇಶ, ಕನ್ನಡತ್ವ-ಕನ್ನಡತನ: ಕನ್ನಡತ್ವ ಹಾಗೂ ಕನ್ನಡತನ ಕುವೆಂಪು ಅವರ ವೈಶಿಷ್ಟ್ಯ ಎನ್ನಬಹುದು. ಕನ್ನಡ ಮತ್ತು ಕರ್ನಾಟಕದ ಕುರಿತಂತೆ ಅತೀ ಹೆಚ್ಚು ಕವನ ಬರೆದವರು ಕುವೆಂಪು. ಕರ್ನಾಟಕದ ಏಕೀಕರಣ ಚಳವಳಿಗೂ ಅವರು ಬೆಂಬಲ ನೀಡಿದ್ದರು.

ವಿಶ್ವ ಮಾನವ ಸಂದೇಶವನ್ನು ಜಗತ್ತಿಗೆ ನೀಡಿದ ಮಹಾನ್ ದಾರ್ಶನಿಕ ಕುವೆಂಪು. ಜನಸಾಮಾನ್ಯರ ಪರವಾಗಿ ಧ್ವನಿ ಎತ್ತಿದವರು ಅವರು. ಇಂಥ ವ್ಯಕ್ತಿಯೊಬ್ಬರು ಕನ್ನಡ ನಾಡಿನಲ್ಲಿದ್ದರೆಂಬುದು ನಮಗೆಲ್ಲಾ ಹೆಮ್ಮೆ. ಬದುಕಿನಲ್ಲಿ ಕುವೆಂಪು ಅವರ ವಿಚಾರಧಾರೆಯನ್ನು ಅಳವಡಿಸಿಕೊಂಡರೆ ಮಾನವರಾಗಲು, ಮನುಷ್ಯನೆನಿಸಿಕೊಳ್ಳಲು ಸಾಧ್ಯ. ಅವರ ವಿಚಾರಗಳು ಎಲ್ಲರಿಗೂ ದಾರಿದೀಪ ಎಂದು ಡಾ. ಸುಧಾಕರ ದೇವಾಡಿಗ ನುಡಿದರು.

ಮಹಾತ್ಮಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ ಎಸ್.ನಾಯ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಸಂಯೋಜಕ ಹಾಗೂ ಉಜಿರೆ ಎಸ್‌ಡಿಎಂ ಕಾಲೇಜಿನ ಪ್ರಾಧ್ಯಾಪಕ ಡಾ.ರಾಜಶೇಖರ ಹಳೆಮನೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕಾಲೇಜಿನ ವಿದ್ಯಾರ್ಥಿನಿ ಸ್ವರ್ಣ ಅತಿಥಿಗಳನ್ನು ಸ್ವಾಗತಿಸಿದರೆ, ಎಂಜಿಎಂ  ಸಂಧ್ಯಾ ಕಾಲೇಜಿನ ಕನ್ನಡ ವಿಭಾಗದ ರಾಮಾಂಜಿ ನಮ್ಮ ಭೂಮಿ ಕಾರ್ಯಕ್ರಮ ನಿರೂಪಿಸಿದರು.

Similar News