ಫಿಲಿಪ್ಪೀನ್ಸ್: ಬೂದಿ ಉಗುಳಿದ ಮೆಯಾನ್ ಪರ್ವತ

Update: 2023-06-08 15:06 GMT

ಮನಿಲಾ : ಫಿಲಿಪ್ಪೀನ್ಸ್ ನ  ಮಧ್ಯ ಅಲ್ಬೇಯ್ ಪ್ರಾಂತದಲ್ಲಿರುವ ಮೆಯಾನ್ ಪರ್ವತ ಬೂದಿ ಉಗುಳಲು ಆರಂಭಿಸಿದ್ದು ಒಂದೆರಡು ದಿನದಲ್ಲಿ ಜ್ವಾಲಾಮುಖಿ ಸ್ಫೋಟದ ಸಾಧ್ಯತೆಯಿದೆ ಎಂದು ಫಿಲಿಪ್ಪೀನ್ಸ್ ನ ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ರಾಜಧಾನಿ ಮನಿಲಾಕ್ಕೆ ಸುಮಾರು 330 ಕಿ.ಮೀ ದೂರದಲ್ಲಿರುವ ಮೆಯಾನ್, ದೇಶದ 24 ಅತ್ಯಂತ ಸಕ್ರಿಯ ಜ್ವಾಲಾಮುಖಿಗಳಲ್ಲಿ ಒಂದಾಗಿದೆ. ಪರ್ವತದಿಂದ ಬೂದಿ ಹೊರಹಾರುತ್ತಿರುವುದರಿಂದ ಕೆಲ ದಿನಗಳಲ್ಲೇ ಜ್ವಾಲಾಮುಖಿ ಸ್ಫೋಟಗೊಳ್ಳುವ ಲಕ್ಷಣಗಳಿವೆ ಎಂದು ಫಿಲಿಪ್ಪೀನ್ಸ್ ನ ಜ್ವಾಲಾಮುಖಿ ಮತ್ತು ಭೂಕಂಪಶಾಸ್ತ್ರ ಕೇಂದ್ರ ಎಚ್ಚರಿಕೆ ನೀಡಿರುವುದರಿಂದ  ಪರ್ವತದ ಸುತ್ತಮುತ್ತ ವಾಸಿಸುವ ನೂರಾರು ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.  

ಮೆಯಾನ್ ಪರ್ವತದ ಇಳಿಜಾರಿನಲ್ಲಿ ಪೈರೊಕ್ಲಾಸ್ಟಿಕ್ ಡೆನ್ಸಿಟಿ ಕರೆಂಟ್ಸ್(ಪಿಡಿಸಿ) ಎಂದು ಕರೆಯಲ್ಪಡುವ ಜ್ವಾಲಾಮುಖಿ ಬೂದಿ, ಕಲ್ಲು ಮತ್ತು ಅನಿಲಗಳ ಮೂರು ವೇಗವಾಗಿ ಚಲಿಸುವ ಹಿಮಪಾತವನ್ನು ಗುರುವಾರ ಗಮನಿಸಲಾಗಿದೆ. ಲಾವಾ ಹರಿವು ಮತ್ತು ಅಪಾಯಕಾರಿ ಪಿಡಿಸಿ ಈ ವಾರದೊಳಗೆ ಇನ್ನಷ್ಟು ಸ್ಫೋಟಗೊಳ್ಳುವ ಸಾಧ್ಯತೆಯಿದೆ ಎಂದು ಪ್ರಾಂತೀಯ ವಿಪತ್ತು ನಿರ್ವಹಣಾ ಘಟಕದ ಅಧಿಕಾರಿ ಯೂಜಿನ್ ಎಸ್ಕೋಬಾರ್ ಹೇಳಿದ್ದಾರೆ.

Similar News