ಮೋದಿ ರಥ ತಡೆಯಲು ನಿತೀಶ್ ಸಮರ್ಥರು: ತೇಜಸ್ವಿ ಯಾದವ್

Update: 2023-06-09 04:49 GMT

ಪಾಟ್ನಾ: "ಹಿಂದೆ ನಮ್ಮ ತಂದೆ ಲಾಲೂ ಪ್ರಸಾದ್ ಯಾದವ್, ಅಡ್ವಾನಿಯವರ ಯಾತ್ರೆ ತಡೆದಂತೆ ಬಿಹಾರದ ಆಡಳಿತಾರೂಢ ಮಹಾಮೈತ್ರಿ ನರೇಂದ್ರ ಮೋದಿಯವರ ರಥವನ್ನು ತಡೆಯಲಿದೆ" ಎಂದು ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಭವಿಷ್ಯ ನುಡಿದಿದ್ದಾರೆ. ಕೇಂದ್ರದ ಅಧಿಕಾರಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ಸರ್ಕಾರ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸಲು ವಿಫಲವಾಗಿದೆ. ಆದರೆ ಈ ಲೋಪಗಳನ್ನು ಎತ್ತಿ ತೋರಿಸಿದಾಗಲೆಲ್ಲ "ಹಿಂದೂ ವರ್ಸಸ್ ಮುಸ್ಲಿಂ" ಸಿದ್ಧಾಂತವನ್ನು ಪ್ರತಿಪಾದಿಸುತ್ತದೆ ಎಂಬ ಗಂಭೀರ ಆರೋಪ ಮಾಡಿದರು.

"ಹಿಂದೂಗಳಾಗಲೀ, ಮುಸ್ಲಿಮರಾಗಲೀ ಅಥವಾ ಯಾವುದೇ ಧಾರ್ಮಿಕ ಸಮುದಾಯ ಇರಲಿ, ಎಲ್ಲರೂ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ್ದಾರೆ. ಮುಸ್ಲಿಮರನ್ನು ಮತದ ಹಕ್ಕಿನಿಂದ ವಂಚಿಸಲಾಗುತ್ತಿದೆ ಎಂಬ ರೀತಿಯ ಆಕ್ರೋಶಗಳು ಕೆಲವೆಡೆಯಿಂದ ಕೇಳಿ ಬರುತ್ತಿವೆ" ಎಂದು ವಿವರಿಸಿದರು.

"ಆದರೆ ಉಳಿದ ಎಲ್ಲರೂ ಭರವಸೆ ನೀಡಿದರೆ, ಲಾಲೂ ಪ್ರಸಾದ್ ಹಾಗೂ ನಿತೀಶ್ ಕುಮಾರ್ ಅವರಂಥ ನಾಯಕರು ನಮ್ಮ ಸುತ್ತ ಇರುವಾಗ, ಯಾರೂ ಕೂಡಾ ಅಂಥದ್ದು ಮಾಡುವ ಧೈರ್ಯ ತೋರಲಾರರು... ಈ ದೇಶ ಯಾರಪ್ಪನ ಆಸ್ತಿಯೂ ಅಲ್ಲ" ಎಂದು ಗುಡುಗಿದರು.

"ಲಾಲೂ ಎಲ್.ಕೆ.ಅಡ್ವಾನಿಯವರ ರಥ ತಡೆದಿದ್ದರು. ಇದೀಗ ನಿತೀಶ್ ಕುಮಾರ್ ನೇತೃತ್ವದ ಮಹಾಘಟಬಂಧನ ನರೇಂದ್ರ ಮೋದಿಯವರ ರಥವನ್ನು ತಡೆಯಲಿದೆ" ಎಂದು ರಾಜ್ಯ ಕೈಮಗ್ಗ ನೇಕಾರರ ಸಹಕಾರ ಒಕ್ಕೂಟ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು ಭವಿಷ್ಯ ನುಡಿದರು.

Similar News