ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ: ಭೋಜ್‌ಪುರಿ ಗಾಯಕನ ಬಂಧನ

Update: 2023-06-09 06:50 GMT

ಗುರುಗ್ರಾಮ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಹಾಗೂ  ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಚಿತ್ರಗಳನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ಭೋಜ್‌ಪುರಿ ಗಾಯಕನನ್ನು ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ಬಿಹಾರ ಮೂಲದ ಅಭಿಷೇಕ್ (21 ವರ್ಷ) ಎಂದು ಗುರುತಿಸಲಾಗಿದ್ದು, ಈತ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ 27,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾನೆ.

ಪೊಲೀಸರ ಪ್ರಕಾರ, ಆರೋಪಿಯು ಎರಡು ವರ್ಷಗಳ ಹಿಂದೆ ರಾಜೀವ್ ನಗರದಲ್ಲಿ ವಾಸಿಸುತ್ತಿದ್ದಾಗ 13 ವರ್ಷದ ಬಾಲಕಿಗೆ ಆಮಿಷವೊಡ್ಡಿದ್ದ. ಬಾಲಕಿಯೊಂದಿಗೆ ಸ್ನೇಹ ಬೆಳೆಸಿದ ಬಳಿಕ  ಹೋಟೆಲ್ ರೂಮಿಗೆ ಕರೆದೊಯ್ದು ಅತ್ಯಾಚಾರವೆಸಗಿ ಬಾಲಕಿಯ ಚಿತ್ರಗಳನ್ನು ತೆಗೆದಿದ್ದಾನೆ.

ಘಟನೆಯ ನಂತರ ಅಪ್ರಾಪ್ತ ಬಾಲಕಿ ಆರೋಪಿಯಿಂದ ದೂರ ಉಳಿದಿದ್ದು, ಆತನ ಬಗ್ಗೆ ಯಾರಿಗೂ ಹೇಳಿರಲಿಲ್ಲ.

ಆರೋಪಿಯು ಕೆಲವು ದಿನಗಳ ಹಿಂದೆ ಅಪ್ರಾಪ್ತ ಬಾಲಕಿಯ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆ ಚಿತ್ರಗಳನ್ನು ನೋಡಿದ ನಂತರ, ಸಂತ್ರಸ್ತೆಯ ಕುಟುಂಬದವರು ಬಾಲಕಿಯನ್ನು ಪ್ರಶ್ನಿಸಿದರು, ನಂತರ ಬಾಲಕಿ ಘಟನೆಯ ವಿವರ ಹಂಚಿಕೊಂಡಿದೆ ಎಂದರು.

Similar News