ಶರದ್ ಪವಾರ್‌ಗೆ ಕೊಲೆ ಬೆದರಿಕೆ: ಎನ್‌ಸಿಪಿ ಆರೋಪ

Update: 2023-06-09 10:27 GMT

ಮುಂಬೈ: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ "ಕೊಲೆ ಬೆದರಿಕೆ" ಬಂದಿದೆ ಎಂದು ಎನ್‌ಸಿಪಿ ಶುಕ್ರವಾರ ಆರೋಪಿಸಿದೆ.

ಈ ವಿಷಯವನ್ನು ಪರಿಗಣನೆಗೆ ತೆಗೆದುಕೊಂಡಿರುವ ಮುಂಬೈ ಪೊಲೀಸರು ಪ್ರಥಮ ಮಾಹಿತಿ ವರದಿಯನ್ನು ದಾಖಲಿಸುವ ಪ್ರಕ್ರಿಯೆಯಲ್ಲಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪವಾರ್ ಅವರ ಪುತ್ರಿ ಮತ್ತು ಲೋಕಸಭಾ ಸದಸ್ಯೆ ಸುಪ್ರಿಯಾ ಸುಳೆ ನೇತೃತ್ವದ ಎನ್‌ಸಿಪಿ ಕಾರ್ಯಕರ್ತರ ನಿಯೋಗ ಮುಂಬೈ ಪೊಲೀಸ್ ಮುಖ್ಯಸ್ಥ ವಿವೇಕ್ ಫನ್ಸಾಲ್ಕರ್ ಅವರನ್ನು ಭೇಟಿ ಮಾಡಿ ಕ್ರಮಕ್ಕೆ ಒತ್ತಾಯಿಸಿದೆ.

ಶೀಘ್ರದಲ್ಲೇ (ನರೇಂದ್ರ) ದಾಭೋಲ್ಕರ್ ಅವರಂತೆಯೇ ಸ್ಥಿತಿಯನ್ನು ಎದುರಿಸುತ್ತಾರೆ ಎಂಬ ಸಂದೇಶವನ್ನು 82 ವರ್ಷದ ಪವಾರ್ ಅವರು ಫೇಸ್‌ಬುಕ್‌ನಲ್ಲಿ ಸ್ವೀಕರಿಸಿದ್ದಾರೆ ಎಂದು ಎನ್‌ಸಿಪಿ ನಾಯಕರು ಪೊಲೀಸರಿಗೆ ತಿಳಿಸಿದ್ದಾರೆ,

ಮೂಢ ನಂಬಿಕೆಗಳ ವಿರುದ್ಧ ಹೋರಾಡಿದ ನರೇಂದ್ರ ದಾಭೋಲ್ಕರ್ ಅವರನ್ನು ಆಗಸ್ಟ್ 20, 2013 ರಂದು ಪುಣೆಯಲ್ಲಿ ಬೆಳಗಿನ ನಡಿಗೆಯ ವೇಳೆ  ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು.

ಸುಪ್ರಿಯಾ ಸುಳೆ ಅವರು ಕೊಲೆ ಬೆದರಿಕೆಯ ಸ್ಕ್ರೀನ್‌ಶಾಟ್‌ಗಳ ಪ್ರಿಂಟ್‌ ಔಟ್‌ಗಳನ್ನು ಪೊಲೀಸರಿಗೆ ಸಲ್ಲಿಸಿದ್ದಾರೆ.

“ಎನ್‌ಸಿಪಿ ಮುಖ್ಯಸ್ಥರಿಗೆ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಬಂದಿರುವ ಬೆದರಿಕೆಯ ಕುರಿತು ತಿಳಿಸಲಾಗಿದೆ. ನಾವು ಅದನ್ನು ಪರಿಶೀಲಿಸುತ್ತಿದ್ದೇವೆ. ನಾವು ತನಿಖೆಯನ್ನು ಆರಂಭಿಸಿದ್ದೇವೆ’’ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

Similar News