ಹಜ್‌ ಯಾತ್ರೆ ಸಂಘಟಕರ ನೋಂದಣಿ ಪ್ರಮಾಣಪತ್ರ ಮರುಸ್ಥಾಪಿಸಿದ ದಿಲ್ಲಿ ಹೈಕೋರ್ಟ್‌

Update: 2023-06-09 10:52 GMT

ಹೊಸದಿಲ್ಲಿ: ಹಲವಾರು ಹಜ್‌ ಯಾತ್ರೆ ಸಂಘಟಕರ ನೋಂದಣಿ ಪ್ರಮಾಣಪತ್ರಗಳು ಹಾಗೂ ಹಜ್‌ ಕೋಟಾಗಳನ್ನು ದಿಲ್ಲಿ ಹೈಕೋರ್ಟ್‌ ಮರುಸ್ಥಾಪಿಸಿದೆ.

ಹಜ್‌ ಯಾತ್ರೆ ಸಂಘಟಕರ ಪ್ರಮಾಣಪತ್ರಗಳು ಮತ್ತು ಕೋಟಾಗಳನ್ನು ವಜಾಗೊಳಿಸಿದರೆ, ಅವರೊಂದಿಗೆ ನೋಂದಣಿ ಮಾಡಿಸಿಕೊಂಡಿರುವ ಯಾತ್ರಾರ್ಥಿಗಳಿಗೆ ಸಂವಿಧಾನದಡಿ ರಕ್ಷಿತವಾಗಿರುವ ತಮ್ಮ ಧಾರ್ಮಿಕ ಕರ್ತವ್ಯಗಳನ್ನು ನೆರವೇರಿಸಲು ಸಾಧ್ಯವಾಗದು ಎಂದು ಜಸ್ಟಿಸ್‌ ಚಂಧ್ರ ಧಾರಿ ಸಿಂಗ್‌ ಹೇಳಿದ್ದಾರೆ.

“ಇಂತಹ ಒಂದು ಕ್ರಮವು ಪ್ರಸ್ತುತ ಹಜ್‌ ನೀತಿಯ ಉದ್ದೇಶವನ್ನು ಸೋಲಿಸುತ್ತದೆ ಹಾಗೂ ಸಂವಿಧಾನದ ವಿಧಿ 24 ಇದರ ನಿಂದನೆಯಾಗಿದೆ" ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.

ಸಂವಿಧಾನದ ವಿಧಿ 25 ವ್ಯಕ್ತಿಯೊಬ್ಬನಿಗೆ ತನ್ನ ಧರ್ಮವನ್ನು ಆಚರಿಸಲು, ಪಾಲಿಸಲು ಹಾಗೂ ಅದರ ಪ್ರಚಾರದ ಹಕ್ಕನ್ನು  ಖಾತ್ರಿಪಡಿಸುತ್ತದೆ.

ತಮ್ಮ ನೋಂದಣಿ ಪ್ರಮಾಣಪತ್ರ ಹಾಗೂ ಹಜ್‌ ಕೋಟಾಗಳನ್ನು  ವಜಾಗೊಳಿಸಿ ಕೇಂದ್ರ ಸರಕಾರ ಮೇ 25ರಂದು  ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಹಜ್‌ ಯಾತ್ರೆ ಸಂಘಟಕರು ಸಲ್ಲಿಸಿದ್ದ ಹಲವು ಅರ್ಜಿಗಳ ವಿಚಾರಣೆಯನ್ನು ದಿಲ್ಲಿ ಹೈಕೋರ್ಟ್‌ ನಡೆಸಿದೆ. ಈ ಸಂಘಟನೆಗಳು ವಾಸ್ತವಗಳನ್ನು ತಪ್ಪಾಗಿ ಬಿಂಬಿಸಿವೆ ಎಂಬ ಕಾರಣ ನೀಡಿ ಸರ್ಕಾರ ಕ್ರಮಕೈಗೊಂಡಿತ್ತು.

ಹಜ್‌ ಯಾತ್ರೆ ಸಂಘಟಕರ ಪ್ರಮಾಣಪತ್ರಗಳನ್ನು ನ್ಯಾಯಾಲಯ ಮರುಸ್ಥಾಪಿಸಿದೆಯಾದರೂ ಇಂತಹ ಸಂಸ್ಥೆಗಳ ವಿರುದ್ಧದ ತನಿಖೆಯನ್ನು ಮುಂದುವರಿಸಲು ಸರ್ಕಾರಕ್ಕೆ ನ್ಯಾಯಾಲಯ ಅನುಮತಿಸಿದೆ.

ಅರ್ಜಿದಾರರ ತಪ್ಪುಗಳಿಂದಾಗಿ ಯಾತ್ರಾರ್ಥಿಗಳು ಬಾಧಿತರಾಗದಂತೆ ಹಾಗೂ ಅವರು ಯಾವುದೇ ಅಡೆತಡೆಯಿಲ್ಲದೆ ಹಜ್‌ ಯಾತ್ರ  ಕೈಗೊಳ್ಳುತ್ತಾರೆ ಎಂಬುದನ್ನು ಕೇಂದ್ರ ಸರ್ಕಾರ ಖಾತ್ರಿಪಡಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಭಾರತದಲ್ಲಿ ಹೆಚ್ಚಿನ ಹಜ್‌ ಯಾತ್ರಾರ್ಥಿಗಳು ಭಾರತ ಸರ್ಕಾರದ ಹಜ್‌ ಸಮಿತಿ ಮುಖಾಂತರ ಪ್ರಯಾಣಿಸುತ್ತಾರೆ, ಉಳಿದವರು ಹಜ್‌ ಯಾತ್ರೆ ಸಂಘಟಕರ ಮುಖಾಂತರ ಯಾತ್ರೆ ಕೈಗೊಳ್ಳುತ್ತಾರೆ.

Similar News