​ಪವಾರ್‌ಗೆ ಬೆದರಿಕೆ ಹಾಕಿದ ಬೆನ್ನಲ್ಲೇ ಸಂಜಯ್‌ ರಾವುತ್ ಗೂ ಕೊಲೆ ಬೆದರಿಕೆ ಕರೆ: ಆರೋಪ

Update: 2023-06-09 13:40 GMT

ಮುಂಬೈ: ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರಿಗೆ ಕೊಲೆ ಬೆದರಿಕೆ ಬಂದಿರುವ ಬೆನ್ನಲ್ಲೇ ಶಿವಸೇನೆ (ಉದ್ಧವ್‌ ಠಾಕ್ರೆ ಬಣ) ಮುಖ್ಯ ವಕ್ತಾರ ಸಂಜಯ್ ರಾವುತ್ ಅವರನ್ನು ಕೊಲೆ ಮಾಡುವುದಾಗಿ ತನಗೆ ಅಪರಿಚಿತ ವ್ಯಕ್ತಿಗಳಿಂದ ಬೆದರಿಕೆ ಕರೆ ಬಂದಿದೆ ಎಂದು ಅವರ ಸಹೋದರ ಶಾಸಕ ಸುನಿಲ್ ರಾವುತ್ ಹೇಳಿದ್ದಾರೆ. 

ಸಂಜಯ್‌ ರಾವತ್‌ ಅವರು ಪತ್ರಿಕಾಗೋಷ್ಟಿಯನ್ನು ನಡೆಸುವುದನ್ನು ಒಂದು ತಿಂಗಳೊಳಗೆ ನಿಲ್ಲಿಸದಿದ್ದರೆ, ಗುಂಡು ಹಾರಿಸಿ ಪ್ರಾಣ ತೆಗೆಯಲಾಗುವುದು ಎಂದು ಬೆದರಿಕೆ ಹಾಕಲಾಗಿದೆ ಎಂದು ಸುನಿಲ್‌ ರಾವುತ್ ತಿಳಿಸಿದ್ದಾರೆ. ಸಂಜೆ ಸುಮಾರು 4.30 ಕ್ಕೆ ನನಗೆ ಕರೆ ಬಂದಿತ್ತು, ಕರೆ ಮಾಡಿದವರು "ನಿಮ್ಮ ಸಹೋದರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಬಾರದು, ಇಲ್ಲದಿದ್ದರೆ ನಾವು ಅವನನ್ನು ಶೂಟ್ ಮಾಡುತ್ತೇವೆ" ಎಂದು ಬೆದರಿಕೆ ಹಾಕಿದ್ದಾರೆಂದು ಸುನಿಲ್‌ ಹೇಳಿದ್ದಾರೆ. 

ಸರ್ಕಾರವು ಸಂಜಯ್ ರಾವುತ್ ಬಗ್ಗೆ ಹೆದರುತ್ತಿದೆ, ಅದಕ್ಕಾಗಿಯೇ ಅವರು ಮಾತನಾಡಬಾರದೆಂದು ಸರ್ಕಾರ ಬಯಸುತ್ತಿದೆ. ಈ ಹಿಂದೆಯೂ ಇಂತಹ ಕರೆಗಳು ಬಂದಿದ್ದವು ಎಂದರು. ಆದರೆ, ಸರಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಸಂಜಯ್ ರಾವುತ್ ಅವರು ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಅವರಿಗೆ ಬೆದರಿಕೆ ಕರೆಗಳ ಕುರಿತು ಪತ್ರ ಬರೆದಿದ್ದು, ತನ್ನ ಸಹೋದರನಿಗೆ ಕರೆ ಬಂದಿದೆ ಮತ್ತು ಕರೆ ಮಾಡಿದವರು ಒಂದು ತಿಂಗಳೊಳಗೆ ಅವನನ್ನು (ಸಂಜಯ್ ರಾವುತ್) ಗುಂಡಿಕ್ಕಿ ಕೊಲ್ಲುವುದಾಗಿ ಹೇಳಿದರು ಎಂದು ಉಲ್ಲೇಖಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ತನಗೆ ಇಂತಹ ಬೆದರಿಕೆ ಕರೆಗಳು ಬರುತ್ತಿವೆ ಮತ್ತು ಅದನ್ನೇ ವರದಿ ಮಾಡಿರುವುದಾಗಿ ರಾವತ್ ತಿಳಿಸಿದ್ದಾರೆ. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಹೇಳಿದ್ದಾರೆ. ಪ್ರತಿಪಕ್ಷ ನಾಯಕರುಗಳಿಗೆ ಕೊಲೆ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌, ಯಾವುದೇ ನಾಯಕರಿಗೆ ಕೊಲೆ ಬೆದರಿಕೆ ಹಾಕುವುದನ್ನು ಸಹಿಸಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

Similar News