×
Ad

​ಉಡುಪಿ: ಶಕ್ತಿ ಯೋಜನೆಗೆ ಉಸ್ತುವಾರಿ ಸಚಿವರಿಂದ ಚಾಲನೆ

Update: 2023-06-09 20:58 IST

ಉಡುಪಿ, ಜೂ.*: ರಾಜ್ಯ ಸರಕಾರ ರಾಜ್ಯದ ಎಲ್ಲಾ ಮಹಿಳೆಯರಿಗೆ (ಶಾಲಾ-ಕಾಲೇಜು ವಿದ್ಯಾರ್ಥಿನಿಯರು ಮತ್ತು ತೃತೀಯ ಲಿಂಗಿಗಳು ಒಳಗೊಂಡಂತೆ) ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಗರ ಸಾರಿಗೆ, ಸಾಮಾನ್ಯ ಸಾರಿಗೆ ಹಾಗೂ ವೇಗದೂತ ಬಸ್ಸುಗಳಲ್ಲಿ ಕರ್ನಾಟಕ ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸುವ ಸೌಲಭ್ಯವನ್ನು ‘ಶಕ್ತಿ ಯೋಜನೆ’ಯಡಿ ರೂಪಿಸಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜೂನ್  11ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ವಿಧಾನಸೌಧದಲ್ಲಿ ಶಕ್ತಿ ಯೋಜನೆಯನ್ನು ಲೋಕಾರ್ಪಣೆಗೊಳಿಸುತ್ತಿದ್ದಾರೆ.

ಇದರೊಂದಿಗೆ ಈ ಯೋಜನೆಯನ್ನು ಎಲ್ಲಾ ಜಿಲ್ಲೆ/ತಾಲೂಕುಗಳಲ್ಲಿ ಲೋಕಾರ್ಪಣೆಗೊಳಿಸಲಾಗುತ್ತಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗದ ವ್ಯಾಪ್ತಿಯಲ್ಲಿ ಬರುವ ದಕ್ಷಿಣ ಕನ್ನಡ ಜಿಲ್ಲೆಯ ನಿಗಮದ ಮಂಗಳೂರು ಬಸ್ಸು ನಿಲ್ದಾಣ ಹಾಗೂ ಬನ್ನಂಜೆಯಲ್ಲಿರುವ ಉಡುಪಿ ಜಿಲ್ಲೆಯ ನಿಗಮದ ಡಾ.ವಿ.ಎಸ್.ಆಚಾರ್ಯ ಬಸ್ಸು ನಿಲ್ದಾಣ ಹಾಗೂ ತಾಲೂಕು ವ್ಯಾಪ್ತಿಯಲ್ಲಿ ಬರುವ ನಿಗಮದ ಕುಂದಾಪುರ ಬಸ್ಸು ನಿಲ್ದಾಣಗಳಲ್ಲಿ ಜೂನ್ 11ರಂದು ಅಪರಾಹ್ನ 12.30ಕ್ಕೆ ಶಕ್ತಿ ಯೋಜನೆಗೆ  ಚಾಲನೆ ನೀಡಲಾಗುವುದು. 

ಜಿಲ್ಲಾ ಮಟ್ಟದಲ್ಲಿ ನಡೆಯುವ ಕಾರ್ಯಕ್ರಮವನ್ನು ಜಿಲ್ಲೆಯ ನೂತನ  ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸಲಿದ್ದು, ಸ್ಥಳೀಯ  ಶಾಸಕರು, ವಿಧಾನಪರಿಷತ್ ಸದಸ್ಯರು ಮತ್ತು ಚುನಾಯಿತ ಜನ ಪ್ರತಿನಿಧಿಗಳು  ಭಾಗವಹಿಸಲಿದ್ದಾರೆ.

ತಾಲೂಕು ಮಟ್ಟದಲ್ಲಿ ಜರಗುವ ಕಾರ್ಯಕ್ರಮದಲ್ಲಿ ಸ್ಥಳೀಯ ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಮತ್ತು ಚುನಾಯಿತ ಜನ ಪ್ರತಿನಿಧಿಗಳು  ಭಾಗವಹಿಸಲಿದ್ದಾರೆ ಎಂದು ಕರಾರಸಾನಿ ಮಂಗಳೂರು ವಿಭಾಗದ ಪ್ರಕಟಣೆ ತಿಳಿಸಿದೆ.

Similar News