ಇಸ್ರೇಲ್‌ನ ಪ್ರಸ್ತಾವಿತ ಸುಧಾರಣೆ ಫೆಲೆಸ್ತೀನ್ ಗೆ ಬೆದರಿಕೆ: ವಿಶ್ವಸಂಸ್ಥೆ

Update: 2023-06-09 16:59 GMT

ರಮಲ್ಲಾ: ಇಸ್ರೇಲ್ನ ಬಲಪಂಥೀಯ ಸಮ್ಮಿಶ್ರ ಸರಕಾರವು ಪ್ರಸ್ತಾಪಿಸಿರುವ ವಿವಾದಾತ್ಮಕ ನ್ಯಾಯಾಂಗ ಸುಧಾರಣೆಗಳು ಫೆಲೆಸ್ತೀನೀಯರಿಗೆ ಅಪಾಯವನ್ನುಂಟು ಮಾಡುತ್ತದೆ ಎಂದು ವಿಶ್ವಸಂಸ್ಥೆ ಸ್ಥಾಪಿಸಿದ ಸ್ವತಂತ್ರ ತನಿಖಾ ಆಯೋಗ ಗುರುವಾರ ವರದಿ ನೀಡಿದೆ.

ಪ್ರಸ್ತಾವಿತ ಶಾಸನವು ಫೆಲೆಸ್ತೀನಿಯನ್ ಪರವಿರುವ ಎನ್ಜಿಒಗಳ ತೆರಿಗೆಯನ್ನು ಹೆಚ್ಚಿಸಬಹುದು ಮತ್ತು ಆಕ್ರಮಿತ ವೆಸ್ಟ್ ಬ್ಯಾಂಕ್ ನಲ್ಲಿ ಇಸ್ರೇಲಿ ಯೋಧರ ಚಟುವಟಿಕೆಗಳನ್ನು ದಾಖಲಿಸುವ ಸಾಮರ್ಥ್ಯವನ್ನು ಮಿತಿಗೊಳಿಸಬಹುದು. ಪ್ರಸ್ತಾವಿತ ಬದಲಾವಣೆಯು ಅಧಿಕಾರಗಳ ಪ್ರತ್ಯೇಕತೆಯ ಮೂಲಭೂತ ಲಕ್ಷಣಗಳನ್ನು ಮತ್ತು ಪ್ರಜಾಪ್ರಭುತ್ವದ ರಾಜಕೀಯ ವ್ಯವಸ್ಥೆಗಳಲ್ಲಿ ಅಗತ್ಯವಾದ ಅಧಿಕಾರದ ಸಮತೋಲನವನ್ನು ಹಾಳುಗೆಡವಲಿದೆ. ವಿಶೇಷವಾಗಿ ಫೆಲೆಸ್ತೀನಿಯನ್ ನಾಗರಿಕರು ಸೇರಿದಂತೆ ಅತ್ಯಂತ ದುರ್ಬಲ ಮತ್ತು ಅನಪೇಕ್ಷಿತ ಸಮುದಾಯಗಳ ಮಾನವ ಹಕ್ಕುಗಳನ್ನು ದುರ್ಬಲಗೊಳಿಸುವ ಅಪಾಯವಿರುವುದಾಗಿ ಕಾನೂನು ತಜ್ಞರು ಎಚ್ಚರಿಸಿದ್ದಾರೆ  ಎಂದು ಆಯೋಗ ಸಲ್ಲಿಸಿರುವ 56 ಪುಟಗಳ ವರದಿ ಹೇಳಿದೆ. ಮಾನವ ಹಕ್ಕುಗಳ ಪ್ರತಿಪಾದಕರ ವಿರುದ್ಧ  ಕಿರುಕುಳ, ಬೆದರಿಕೆಗಳು, ಬಂಧನಗಳು,  ವಿಚಾರಣೆಗಳು , ಅನಿಯಂತ್ರಿತ  ಬಂಧನ, ಚಿತ್ರಹಿಂಸೆ ಮತ್ತು ಅಮಾನವೀಯ ವರ್ತನೆ, ಅವಮಾನಕರವಾಗಿ ನಡೆಸಿಕೊಳ್ಳುವ ಮೂಲಕ ಅವರನ್ನು ಇಸ್ರೇಲ್ ನಿಗ್ರಹಿಸುತ್ತಿದೆ ಎಂದು ಆಯೋಗ ಹೇಳಿದೆ.

2021ರಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿ ರಚಿಸಿದ್ದ ಆಯೋಗವು ಸುಮಾರು 130 ಸಂದರ್ಶನ ನಡೆಸಿ ಈ ವರದಿ ತಯಾರಿಸಿದ್ದು, ಆಕ್ರಮಿತ ವೆಸ್ಟ್ ಬ್ಯಾಂಕ್ ಮತ್ತು ಗಾಝಾದಲ್ಲಿ  ಫೆಲೆಸ್ತೀನಿಯನ್ ಅಧಿಕಾರಿಗಳೂ ಫೆಲೆಸ್ತೀನಿಯನ್ ಮಾನವ ಹಕ್ಕುಗಳ ಕಾರ್ಯಕರ್ತರನ್ನು ಗುರಿಯಾಗಿಸಿರುವುದು ಕಂಡುಬಂದಿದೆ ಎಂದು ಉಲ್ಲೇಖಿಸಿದೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಸರಕಾರ ಪ್ರಸ್ತಾವಿಸಿರುವ ನ್ಯಾಯಾಂಗ ಬದಲಾವಣೆ ಸುಪ್ರೀಂಕೋರ್ಟ್ನ ಕೆಲವು ಅಧಿಕಾರಗಳನ್ನು ನಿಗ್ರಹಿಸಲಿದೆ ಮತ್ತು ನ್ಯಾಯಾಂಗದಲ್ಲಿನ ನೇಮಕಾತಿಯಲ್ಲಿ ಸರಕಾರದ ನಿಯಂತ್ರಣವನ್ನು ಹೆಚ್ಚಿಸಲಿದ್ದು ಇದನ್ನು ವಿರೋಧಿಸಿ ಇಸ್ರೇಲ್ ನಾದ್ಯಂತ ವ್ಯಾಪಕ ಪ್ರತಿಭಟನೆ ನಡೆದಿದೆ. ಸರಕಾರದ ಇತರ ಪ್ರಸ್ತಾವನೆಯು ಇಸ್ರೇಲ್ ನ ಅರಬ್ ಅಲ್ಪಸಂಖ್ಯಾತ ಪ್ರಜೆಗಳು ಫೆಲೆಸ್ತೀನಿಯನ್ ಪರ ಹಿಂಸಾಚಾರ ನಡೆಸಿದರೆ ಅವರ ಪೌರತ್ವವನ್ನು ರದ್ದುಗೊಳಿಸಿ ಗಡೀಪಾರು ಮಾಡಲು ಅವಕಾಶ ನೀಡುತ್ತದೆ. 

Similar News