ಬೆಲಾರಸ್ನಲ್ಲಿ ಶೀಘ್ರ ಪರಮಾಣು ಶಸ್ತ್ರ ನಿಯೋಜನೆ: ಪುಟಿನ್

Update: 2023-06-09 17:32 GMT

ಮಾಸ್ಕೋ: ರಶ್ಯವು ತನ್ನ ಯುದ್ಧತಂತ್ರದ ಪರಮಾಣು ಅಸ್ತ್ರಗಳನ್ನು ಬೆಲಾರಸ್ನತ್ತ ಸಾಗಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದು ಮುಂದಿನ ತಿಂಗಳು ಬೆಲಾರಸ್ನಲ್ಲಿ ನಿಯೋಜಿಸಲಾಗುವುದು ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.

ರಶ್ಯಕ್ಕೆ ಭೇಟಿ ನೀಡಿರುವ ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಶೆಂಕೊ ಜತೆ ಸೋಚಿ ನಗರದಲ್ಲಿ ನಡೆಸಿದ ಸಭೆಯಲ್ಲಿ ಮಾತನಾಡಿದ ಪುಟಿನ್, ಬೆಲಾರಸ್ನಲ್ಲಿ ನಿರ್ಮಿಸಲಾಗುತ್ತಿರುವ ಪರಮಾಣು ಶಸ್ತ್ರಾಸ್ತ್ರ ಸಂಗ್ರಹಾಗಾರ ಜುಲೈ 8ರೊಳಗೆ ಪೂರ್ಣಗೊಳ್ಳಲಿದೆ. ಆ ಬಳಿಕ ಶಸ್ತ್ರಾಸ್ತ್ರಗಳನ್ನು ಅಲ್ಲಿ ನಿಯೋಜಿಸಲಾಗುವುದು ಎಂದು ಹೇಳಿದ್ದಾರೆ.

ನೇಟೊ ಸಂಘಟನೆ ಉಕ್ರೇನ್ಗೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳ ನೆರವು ರವಾನಿಸಿದ ಬಳಿಕ, ಇದೇ ಮೊದಲ ಬಾರಿಗೆ ರಶ್ಯದಿಂದ ಹೊರಗಿನ ಸ್ಥಳದಲ್ಲಿ, ಬೆಲಾರಸ್ನಲ್ಲಿ  ಯುದ್ಧತಂತ್ರದ ಪರಮಾಣು ಶಸ್ತ್ರಾಸ್ತ್ರಗಳನ್ನು ನಿಯೋಜಿಸಲು ನಿರ್ಧರಿಸಿರುವುದಾಗಿ ಕಳೆದ ಮಾರ್ಚ್ನಲ್ಲಿ ಪುಟಿನ್ ಘೋಷಿಸಿದ್ದರು. ಇದರಂತೆ ಎಲ್ಲವೂ ಯೋಜಿಸಿದ ರೀತಿಯಲ್ಲೇ ನಡೆಯುತ್ತಿದೆ. ಬೆಲಾರಸ್ನಲ್ಲಿ ಪರಮಾಣು ಶಸ್ತ್ರಾಸ್ತ್ರ ನಿಯೋಜನೆ ಕುರಿತು ಬೆಲಾರಸ್ ಜತೆ ಒಪ್ಪಂದ ಮಾಡಿಕೊಂಡಿದ್ದು, ನಿಯೋಜಿತ ಶಸ್ತ್ರಾಸ್ತ್ರಗಳು ರಶ್ಯದ ನಿಯಂತ್ರಣದಲ್ಲಿರುತ್ತವೆ ಎಂದು ರಶ್ಯದ ಅಧಿಕಾರಿಗಳು ಹೇಳಿದ್ದಾರೆ.

Similar News