ಮಣಿಪುರದಲ್ಲಿ ಮತ್ತೆ ಹಿಂಸಾಚಾರ: 11 ಮಂದಿ ಪೊಲೀಸರು, ಅಧಿಕಾರಿಗಳ ವರ್ಗಾವಣೆ

Update: 2023-06-10 14:07 GMT

ಇಂಫಾಲ: ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಮರುಕಳಿಸಿದ್ದು, ಇದರ ಬೆನ್ನಿಗೇ ಪ್ರಮುಖ ಮರು ನಿಯೋಜನೆಯಲ್ಲಿ ಐಎಎಸ್ ಅಧಿಕಾರಿಗಳೂ ಸೇರಿದಂತೆ 11 ಮಂದಿ ಪೊಲೀಸರು ಹಾಗೂ ಹಲವಾರು ಉನ್ನತ ಮಟ್ಟದ ಅಧಿಕಾರಿಗಳನ್ನು ವರ್ಗಾವಣೆಗೊಳಿಸಲಾಗಿದೆ. ನಿನ್ನೆ ನಡೆದ ದಂಗೆಯಲ್ಲಿ ಮಹಿಳೆಯೂ ಸೇರಿದಂತೆ ಮೂರು ಮಂದಿ ಮೃತಪಟ್ಟಿದ್ದಾರೆ ಎಂದು ndtv.com ವರದಿ ಮಾಡಿದೆ.

ಶುಕ್ರವಾರ ಬೆಳಗ್ಗೆ ಶಂಕಿತ ದಂಗೆಕೋರರು ಖೋಕೆನ್ ಗ್ರಾಮವನ್ನು ಪ್ರವೇಶಿಸಿ ಗುಂಡು ಹಾರಿಸಿದ್ದರಿಂದ ಮೂವರು ಗ್ರಾಮಸ್ಥರು ಮೃತಪಟ್ಟು, ಇಬ್ಬರು ಗಾಯಗೊಂಡಿದ್ದರಿಂದ ಮಣಿಪುರ ಮತ್ತೆ ಉದ್ವಿಗ್ನಗೊಂಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮೂಲನಿವಾಸಿ ಬುಡಕಟ್ಟು ನಾಯಕರ ರಂಗ(ITLF)ವು, ಇದು ದಂಗೆಕೋರರ ಅಗೌರವಯುತ ನಡೆಗೆ ಮತ್ತೊಂದು ಉದಾಹರಣೆಯಾಗಿದ್ದು, ಸಂಚುಕೋರರ ವಿರುದ್ಧ ಕ್ಷಿಪ್ರ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದೆ.

ಮಣಿಪುರದ ಇನ್ನೆರಡು ಜಿಲ್ಲೆಗಳಲ್ಲೂ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂಬ ವರದಿಗಳು ಬಂದಿವೆ. ಆದರೆ, ಈ ಕುರಿತು ಈವರೆಗೆ ಯಾವುದೇ ಅಧಿಕೃತ ದೃಢೀಕರಣ ದೊರೆತಿಲ್ಲ ಎಂದು ವರದಿಯಾಗಿದೆ.

ಮಣಿಪುರದಲ್ಲಿ ಮುಂದುವರಿದಿರುವ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಶರ್ಮ ಅವರು ಶನಿವಾರ ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಹಾಗೂ ಮತ್ತಿತರರನ್ನು ಭೇಟಿಯಾಗಲಿದ್ದಾರೆ. ಮೇ 3ರಂದು ಹಿಂಸಾಚಾರ ಸ್ಫೋಟಗೊಂಡ ನಂತರ ಇದೇ ಮೊದಲ ಬಾರಿಗೆ ಹಿಮಂತ ಶರ್ಮ ಮಣಿಪುರಕ್ಕೆ ಭೇಟಿ ನೀಡುತ್ತಿದ್ದು, ಶಾಂತಿಗಾಗಿನ ಬಿಜೆಪಿ ಪ್ರಯತ್ನದ ರಾಜಕೀಯ ಮಾರ್ಗ ನಕ್ಷೆ ಇದೆಂದು ಹೇಳಲಾಗುತ್ತಿದೆ.

ರಾಜ್ಯದಲ್ಲಿ ಅಂತರ್ಜಾಲ ಸೇವೆ ಸ್ಥಗಿತದ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಲು ಶುಕ್ರವಾರ ಸುಪ್ರೀಂಕೋರ್ಟ್‌ ನಿರಾಕರಿಸಿದೆ.‌ ರಾಜ್ಯ ಹೈಕೋರ್ಟ್ ಕೂಡಾ ಇಂತಹುದೇ ಅರ್ಜಿಗಳಿಂದ ತುಂಬಿ ಹೋಗಿದೆ ಎಂದು ರಜಾಕಾಲ ಪೀಠದ ನ್ಯಾಯಾಧೀಶರಾದ ನ್ಯಾ. ಅನಿರುದ್ಧ್ ಬೋಸ್ ಹಾಗೂ ರಾಜೇಶ್ ಬಿಂದಾಲ್ ಅಭಿಪ್ರಾಯ ಪಟ್ಟಿದ್ದಾರೆ.

ಮಣಿಪುರದಲ್ಲಿ ಮೇ 3ರಂದು ಪ್ರಾರಂಭವಾದ ಜನಾಂಗೀಯ ಹಿಂಸಾಚಾರದಲ್ಲಿ ಈವರೆಗೆ ಸುಮಾರು 100 ಮಂದಿ ಮೃತಪಟ್ಟಿದ್ದು, 310ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೇಯ್ಟಿ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಸ್ಥಾನಮಾನ ನೀಡುವುದರ ವಿರುದ್ಧ ಮಣಿಪುರದ ಗುಡ್ಡಗಾಡು ಜಿಲ್ಲೆಗಳಲ್ಲಿ ಮೇ 3ರಂದು 'ಬುಡಕಟ್ಟು ಸಮುದಾಯಗಳ ಐಕ್ಯತಾ ಪಾದಯಾತ್ರೆ' ನಡೆದ ನಂತರ ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಹಿಂಸಾಚಾರ ಸ್ಫೋಟಗೊಂಡಿತ್ತು. ಈ ಹಿಂಸಾಚಾರದಲ್ಲಿ ಸದ್ಯ ಒಟ್ಟು 37,450 ಮಂದಿ ನಿರಾಶ್ರಿತರಾಗಿದ್ದು, 272 ಪುನರ್ವಸತಿ ಕೇಂದ್ರಗಳಲ್ಲಿ ಇವರಿಗೆಲ್ಲ ಆಸರೆ ಒದಗಿಸಲಾಗಿದೆ.

Similar News