ದ.ಕ. ಜಿಲ್ಲೆಯಲ್ಲಿ ಸಾಧಾರಣ ಮಳೆ: ಜೂ.14ರ ತನಕ ಯೆಲ್ಲೋ ಅಲರ್ಟ್ ಘೋಷಣೆ

Update: 2023-06-10 15:41 GMT

ಮಂಗಳೂರು, ಜೂ.10: ನಗರ ಸಹಿತ ದ.ಕ. ಜಿಲ್ಲೆಯ ಹಲವು ಕಡೆ ಶನಿವಾರ ಬೆಳಗ್ಗಿನಿಂದಲೇ ಸಾಧಾರಣ ಮಳೆಯಾಗಿದೆ. ಬಿಸಿಲ ಬೇಗೆಯಿಂದ ತತ್ತರಿಸಿದ್ದ ಜನತೆಗೆ ಮುಂಗಾರು ಮಳೆಯು ತಂಪಿನ ಅನುಭವವಾಯಿತು.
ಹವಾಮಾನ ಇಲಾಖೆ ಪ್ರಕಾರ ಜಿಲ್ಲೆಯಲ್ಲಿ ಜೂ.14ರ ತನಕ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹಾಗಾಗಿ ಈ ಅವಧಿಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಜಿಲ್ಲೆಯ ಬಹುತೇಕ ಕಡೆ ಮೋಡ ಕವಿದ ವಾತಾವರಣದೊಂದಿಗೆ ಆಗಾಗ ಸಾಧಾರಣದಿಂದ ಉತ್ತಮ ಮಳೆಯಾಗಿದೆ. ಗ್ರಾಮಾಂತರ ಪ್ರದೇಶಗಳಾದ ಪುತ್ತೂರು, ಕಡಬ, ಸುಳ್ಯ ತಾಲೂಕಿನಾದ್ಯಂತ ಬೆಳಗ್ಗೆಯಿಂದಲೇ ಮೋಡ ಕವಿದು ತುಂತುರು ಮಳೆಯಾಗಿದ್ದರೆ, ಮಧ್ಯಾಹ್ನ ಕೆಲಕಾಲ ಬಿರುಸಿನ ಮಳೆ ಸುರಿದಿದೆ. ಮಂಗಳೂರು, ಉಳ್ಳಾಲ, ಬಂಟ್ವಾಳ, ಬೆಳ್ತಂಗಡಿ ತಾಲೂಕಿನ ಬಹುತೇಕ ಕಡೆಯೂ ಉತ್ತಮ ಮಳೆಯಾಗಿದೆ. ಗ್ರಾಮೀಣ ಭಾಗದ  ಕೆಲವು ಕಡೆಗಳಲ್ಲಿ ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದು, ವಿದ್ಯುತ್ ಕಡಿತವಾಗಿದೆ.

ನಗರದ ಬಿಜೈಯಲ್ಲಿ ರಸ್ತೆಗೆ ಮರ ಬಿದ್ದು ಸುಮಾರು ಅರ್ಧ ಗಂಟೆ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಸಾಮಾನ್ಯವಾಗಿ ಮಳೆಗಾಲ ಆರಂಭವಾಗುತ್ತಲೇ ನಗರದಲ್ಲಿ ಟ್ರಾಫಿಕ್ ಸಮಸ್ಯೆ ತಲೆದೋರುತ್ತಿವೆ. ಅದರಂತೆ ಶನಿವಾರವೂ ಟ್ರಾಫಿಕ್ ಜಾಮ್‌ನಿಂದ ವಾಹನಿಗರು ಪರದಾಡಿದರು.

ಸ್ಮಾರ್ಟ್ ಸಿಟಿಯ ಹಿರಿಮೆಯ ಮಧ್ಯೆಯೂ ನಗರದಲ್ಲಿ ಚರಂಡಿಯ ಅವ್ಯವಸ್ಥೆಯಿಂದಾಗಿ ರಸ್ತೆಯಲ್ಲೇ ಮಳೆ ನೀರು ಹರಿಯುತ್ತಿರುವುದು ಕಂಡು ಬಂತು. ಶನಿವಾರ ರಾತ್ರಿಯೂ ಬಿರುಸಿನ ಮಳೆಯಾಗಿದೆ.

ಮೀನುಗಾರರಿಗೆ ಎಚ್ಚರಿಕೆ: ಕರ್ನಾಟಕ ಕರಾವಳಿಯಲ್ಲಿ ಗಂಟೆಗೆ 40ರಿಂದ 45 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಹಾಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಮನೆಗೆ ಮರ ಬಿದ್ದು ಮೂವರಿಗೆ ಗಾಯ: ನಗರ ಹೊರವಲಯದ ಕಾವೂರು ಸಮೀಪದ ಬಿಜಿಎಸ್ ಪ್ರೌಢಶಾಲೆಯ ಬಳಿ ಮನೆಯೊಂದರ ಮೇಲೆ ಮರ ಉರುಳಿಬಿದ್ದ ಪರಿಣಾಮ ಮನೆಯ ಯಜಮಾನ ಸಹಿತ ಮೂವರು ಗಾಯಗೊಂಡ ಘಟನೆ ಶನಿವಾರ  ನಡೆದಿದೆ. ಮನೆಯ ಯಜಮಾನ ಸದಾನಂದ, ಅವರ ಪತ್ನಿ ರತ್ನಾ ಹಾಗೂ ಅವರ ಪುತ್ರಿ ಗಾಯಗೊಂಡಿದ್ದಾರೆ. ಮನೆ ಸಂಪೂರ್ಣ ಜಖಂಗೊಂಡಿದ್ದು, ಸಾಕಷ್ಟು ಹಾನಿ ಸಂಭವಿಸಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಶಾಸಕ ಡಾ.ಭರತ್ ಶೆಟ್ಟಿ, ಮನಪಾ ಸದಸ್ಯೆ ಸುಮಂಗಲಾ ರಾವ್ ಮತ್ತಿತರ ಪ್ರಮುಖರು ಭೇಟಿ ನೀಡಿ ಪರಿಶೀಲಿಸಿದರು.

Similar News