ಮೋದಿಗೆ ಬರೆದ ಖರ್ಗೆ ಪತ್ರಕ್ಕೆ ಬಿಜೆಪಿ ಪ್ರತಿಕ್ರಿಯೆ ಅಸಹಿಷ್ಣುತೆಗೆ ಉದಾಹರಣೆ: ಚಿದಂಬರಂ

Update: 2023-06-10 17:30 GMT

ಹೊಸದಿಲ್ಲಿ, ಜೂ. 10: ಒಡಿಶಾ ರೈಲು ದುರಂತದ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರಕ್ಕೆ ಆಕ್ಷೇಪ ವ್ಯಕ್ತಪಡಿಸಿರುವುದಕ್ಕೆ ಕರ್ನಾಟಕದ ನಾಲ್ವರು ಬಿಜೆಪಿ ಸಂಸದರನ್ನು ಶನಿವಾರ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕ ಪಿ. ಚಿದಂಬರಂ, ಬಿಜೆಪಿ ಯಾವುದೇ ಟೀಕೆಯನ್ನು ಸಹಿಸಿಕೊಳ್ಳುವುದಿಲ್ಲ ಎಂಬುದಕ್ಕೆ ಇದು ಇನ್ನೊಂದು ಉದಾಹರಣೆ ಎಂದಿದ್ದಾರೆ ಮಲ್ಲಿಕಾರ್ಜುನ ಖರ್ಗೆ ಅವರ ಪತ್ರಕ್ಕೆ ಬಿಜೆಪಿ ಸಂಸದರು ನೀಡಿದ ಪ್ರತಿಕ್ರಿಯೆಯಲ್ಲಿ ಸತ್ಯಕ್ಕಿಂತ ವಾಗಾಡಂಬರವೇ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ತೇಜಸ್ವಿ ಸೂರ್ಯ, ಪಿ.ಸಿ. ಮೋಹನ್, ಎಸ್. ಮುನಿಸ್ವಾಮಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಲ್ಲಿಕಾರ್ಜುನ ಖರ್ಗೆ ಬರೆದ ಪತ್ರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ‘‘ಈ ಪತ್ರ ಹೆಚ್ಚು ವಾಕ್ಚಾತುರ್ಯ, ಕಡಿಮೆ ಸತ್ಯದಿಂದ ಕೂಡಿದೆ’’. ವ್ಯಾಟ್ಸ್ಆ್ಯಪ್ ವಿಶ್ವವಿದ್ಯಾನಿಲಯದಿಂದ ಪಡೆದ ಮಾಹಿತಿಯ ಆಧಾರದಲ್ಲಿ ಪ್ರಧಾನಿ ಅವರಿಗೆ ಪತ್ರ ಬರೆಯುವುದು ನಿಮ್ಮಂತಹ ನಾಯಕರಿಗೆ ಸರಿ ಹೊಂದುವುದಿಲ್ಲ.

ಆದರೆ, ವ್ಯಾಟ್ಸ್ ಆ್ಯಪ್ ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾಗಿ ನೀವು ಸುಳ್ಳು ಸುದ್ಧಿಯನ್ನು ಸತ್ಯವೆಂಬಂತೆ ಬಿಂಬಿಸುವ ಬಲವಂತಕ್ಕೆ ಒಳಗಾಗಿದ್ದೀರಿ ಎಂದು ಅವರು ಹೇಳಿದ್ದರು. ಬಿಜೆಪಿ ಸಂಸದರರ ನಿಲುವಿಗೆ ಪ್ರತಿಕ್ರಿಯಿಸಿರುವ ಚಿದಂಬರಂ, ಅವರ ಪ್ರತಿಕ್ರಿಯೆ ಬಿಜೆಪಿ ಯಾವುದೇ ಟೀಕೆಯನ್ನು ಸಹಿಸುವುದಿಲ್ಲ ಎಂಬುದಕ್ಕೆ ಉದಾಹರಣೆ ಎಂದರು. ಖರ್ಗೆ ಅವರು ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿರುವುದರಿಂದ ಅವರಿಗೆ ಪ್ರಧಾನಿ ಅವರಿಗೆ ಪತ್ರ ಬರೆಯುವ ಹಕ್ಕು ಇದೆ ಎಂದು ಚಿದಂಬರಂ ಹೇಳಿದರು. 

Similar News