ಅಸ್ಸಾಂ: ಬಿಜೆಪಿ ನಾಯಕಿ ಮೃತದೇಹ ಹೆದ್ದಾರಿಯಲ್ಲಿ ಪತ್ತೆ; ಹತ್ಯೆ ಶಂಕೆ
ಗುವಾಹತಿ: ಅಸ್ಸಾಂನಲ್ಲಿ ಆಡಳಿತಾರೂಢ ಬಿಜೆಪಿಯ ಗೋಲ್‍ಪಾರಾ ಜಿಲ್ಲಾ ಕಾರ್ಯದರ್ಶಿಯ ಮೃತದೇಹ ಭಾನುವಾರ ರಾತ್ರಿ ಗೋಲ್‍ಪಾರಾದ ಕೃಷ್ಣೈ ಸಲ್ಪಾರಾ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.
ಮೃತರನ್ನು ಜೊನಾಲಿ ನಾಥ್ ಎಂದು ಗುರುತಿಸಲಾಗಿದೆ. ಜೊನಾಲಿ ಅವರ ತಲೆಗೆ ತೀವ್ರ ಗಾಯಗಳಾಗಿರುವುದು ಕಂಡು ಬಂದಿದ್ದು, ಇವರನ್ನು ಹತ್ಯೆ ಮಾಡಿ ಹೆದ್ದಾರಿಯಲ್ಲಿ ಎಸೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಜೊನಾಲಿ ನಾಥ್ ಅವರು ಭಾನುವಾರ ಸಂಜೆ ವೈಯಕ್ತಿಕ ಕೆಲಸಕ್ಕಾಗಿ ಪಕ್ಕದ ಇಸ್ಲಾಂಪುರಕ್ಕೆ ತೆರಳಿದ್ದರು ಎಂದು ಅವರ ಕುಟುಂಬ ಸದಸ್ಯರು ಹೇಳಿದ್ದಾರೆ.
"ಈ ಬಗ್ಗೆ ಈಗಾಗಲೇ ತನಿಖೆ ಆರಂಭಿಸಲಾಗಿದೆ. ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು" ಎಂದು ಗೋಲ್‍ಪಾರಾ ಎಸ್ಪಿ ವಿ.ವಿ.ರಾಕೇಶ್ ರೆಡ್ಡಿ ತಿಳಿಸಿದ್ದಾರೆ.
ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ರಾಜ್ಯ ಬಿಜೆಪಿ ಅಧ್ಯಕ್ಷ ಭಬೇಶ್ ಕಲಿತಾ ಆಗ್ರಹಿಸಿದ್ದು, ಈ ಘಟನೆಯ ಹಿಂದೆ ಯಾವುದೇ ರಾಜಕೀಯ ಹಿನ್ನೆಲೆ ಇದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಬೇಕು" ಎಂದು ಅವರು ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.