×
Ad

ಸಫಾಯಿ ಕರ್ಮಚಾರಿಗಳಿಗೆ ಯೋಜನೆಗಳ ಪ್ರಯೋಜನ ತಲುಪಿಸಿ: ಉಡುಪಿ ಡಿಸಿ ಕೂರ್ಮಾರಾವ್

Update: 2023-06-14 19:47 IST

ಉಡುಪಿ, ಜೂ.14: ಜಿಲ್ಲೆಯ ಸಫಾಯಿ ಕರ್ಮಚಾರಿಗಳಿಗೆ  ಸರಕಾರ ದಿಂದ ದೊರೆಯುವ ವಿವಿಧ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವುದರೊಂದಿಗೆ ಫಲಾನುಭವಿಗಳನ್ನಾಗಿಸಿ ಅವರು  ಆರ್ಥಿಕ ವಾಗಿ ಸಬಲಗೊಳ್ಳುವಂತೆ  ಅಧಿಕಾರಿಗಳು ನೆರವಾಗಬೇಕೆಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದ್ದಾರೆ. 

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತ ಸಮಿತಿಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. 

ಸಫಾಯಿ ಕರ್ಮಚಾರಿಗಳ ಪುನರ್ಸತಿ ಸೇರಿದಂತೆ ಅವರ ಕಲ್ಯಾಣಾಭಿವೃದ್ದಿಗಾಗಿ ಸರಕಾರ ಅನೇಕ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತರುತ್ತಿದೆ. ಇದರ ಲಾಭವನ್ನು ಅವರು ಪಡೆದು ಕೊಳ್ಳುವಂತೆ ಮಾಡುವ ಕೆಲಸವಾಗಬೇಕಿದೆ ಎಂದರು.

ಖಾಸಗಿ, ಗುತ್ತಿಗೆ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಫಾಯಿ ಕರ್ಮಚಾರಿ ಗಳು ಸ್ಚಚ್ಚತಾ ಕಾರ್ಯಗಳನ್ನು ನಿರ್ವಹಿಸುವಾಗ ತಪ್ಪದೇ ಸುರಕ್ಷತಾ ಸಾಧನಗಳನ್ನು ಬಳಸಬೇಕು. ಈ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದರು.

ಸಫಾಯಿ ಕರ್ಮಚಾರಿಗಳ ಆರೋಗ್ಯ ತಪಾಸಣೆಯನ್ನು ಸರಕಾರದ ನಿಯಮಾನುಸಾರ ಆಗಿಂದಾಗ್ಗೆ ಮಾಡಿಸ ಬೇಕು. ಒಂದೊಮ್ಮೆ ಹೆಚ್ಚಿನ ಚಿಕಿತ್ಸೆ ಅವಶ್ಯದ್ದಲ್ಲಿ ಅವರಿಗೆ ಸೂಕ್ತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲು ವ್ಯವಸ್ಥೆ ಮಾಡಬೇಕು ಎಂದರು.

ಸಫಾಯಿ ಕರ್ಮಚಾರಿ ಪ್ರತಿಯೊಬ್ಬರಿಗೂ ಗುರುತಿನ ಚೀಟಿಗಳನ್ನು ನಿಗಮದ ವತಿಯಿಂದಲೇ ಶೀಘ್ರದಲ್ಲಿ ವಿತರಣೆ ಮಾಡಬೇಕು ಎಂದ ಅವರು ಸಮುದಾಯ ಭವನ ನಿರ್ಮಾಣಕ್ಕೆ ಮಣಿಪಾಲದಲ್ಲಿ ಈಗಾಗಲೇ ಜಾಗ ಗುರುತಿಸಲಾ ಗಿದ್ದು ಇದರ ಮಂಜೂರಾತಿಯನ್ನು ಪಡೆದು ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದರು.

ಸಭೆಯಲ್ಲಿ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಎಸ್ಪಿ ಅಕ್ಷಯ್ ಎಂ ಹಾಕೆ, ಸಮಾಜ ಕಲ್ಯಾಣಾ ಧಿಕಾರಿ ಅನಿತಾ ಮಡ್ಲೂರು, ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

Similar News