×
Ad

ವಸ್ತುಸಂಗ್ರಹಾಲಯದಿಂದ ‘ನೆಹರೂ’ ಹೆಸರು ಕೈಬಿಟ್ಟ ಕೇಂದ್ರ ಸರಕಾರ

Update: 2023-06-16 19:47 IST

ಹೊಸದಿಲ್ಲಿ: ದಿಲ್ಲಿಯಲ್ಲಿರುವ ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ವಾಚನಾಲಯವನ್ನು ಇನ್ನು ‘ಪ್ರಧಾನಿಗಳ ಮ್ಯೂಸಿಯಮ್ ಮತ್ತು ಸೊಸೈಟಿ’ ಎಂಬುದಾಗಿ ಕರೆಯಲಾಗುವುದು. ನೆಹರೂ ಸ್ಮಾರಕ ಮ್ಯೂಸಿಯಮ್ ನ್ನು ನವೀಕರಣದ ಬಳಿಕ ಅದನ್ನು ಪ್ರಧಾನ ಮಂತ್ರಿಗಳ ಮ್ಯೂಸಿಯಮ್ ಎಂಬುದಾಗಿಯೇ ಒಂದು ವರ್ಷಕ್ಕೂ ಹಿಂದೆ ಉದ್ಘಾಟಿಸಿಲಾಗಿತ್ತು. ಅದನ್ನು ಇದೇ ಹೆಸರಿನಿಂದ ಕರೆಯಬೇಕೆಂದು ಕೇಂದ್ರ ಸರಕಾರ ಈಗ ಈ ನಿರ್ಧಾರ ತೆಗೆದುಕೊಂಡಿದೆ.

ಗುರುವಾರ ನಡೆದ ನೆಹರೂ ಸ್ಮಾರಕ ಮ್ಯೂಸಿಯಮ್ ಮತ್ತು ವಾಚನಾಲಯ ಸೊಸೈಟಿಯ ಸಭೆಯೊಂದರಲ್ಲಿ, ಮ್ಯೂಸಿಯಮ್ನಿಂದ ‘ನೆಹರೂ’ ಹೆಸರನ್ನು ತೆಗೆಯುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. 2019ರಲ್ಲಿ, ಸೊಸೈಟಿಯ ಸದಸ್ಯತ್ವದಿಂದ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಜೈರಾಮ್ ರಮೇಶ್ ಮತ್ತು ಕರಣ್ ಸಿಂಗ್ ರನ್ನು ತೆಗೆದು ಅದನ್ನು ಪುನರ್ ರಚಿಸಲಾಗಿತ್ತು.

ಆಗ ಪ್ರಧಾನಿ ನರೇಂದ್ರ ಮೋದಿಯನ್ನು ಸೊಸೈಟಿಯ ಅಧ್ಯಕ್ಷರಾಗಿ ಮತ್ತು ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ರನ್ನು ಉಪಾಧ್ಯಕ್ಷರಾಗಿ ನೇಮಕಗೊಳಿಸಲಾಗಿತ್ತು. ನಿರ್ಮಲಾ ಸೀತಾರಾಮನ್, ರಮೇಶ್ ಪೋಖ್ರಿಯಾಲ್, ಪ್ರಕಾಶ್ ಜವಡೇಕರ್, ವಿ. ಮುರಳೀಧರನ್ ಮತ್ತು ಪ್ರಹ್ಲಾದ್ ಸಿಂಗ್ ಪಟೇಲ್ರನ್ನು ಸದಸ್ಯರಾಗಿ ನೇಮಿಸಲಾಗಿತ್ತು.

ಗುರುವಾರ ನಡೆದ ಸಭೆಯ ಅಧ್ಯಕ್ಷತೆಯನ್ನು ರಾಜ್‌ ನಾಥ್ ಸಿಂಗ್ ವಹಿಸಿದ್ದರು.

ಹಿಂದಿನ ನೆಹರು ಮ್ಯೂಸಿಯಮ್ ದಿಲ್ಲಿಯ ತೀನ್ ಮೂರ್ತಿ ಭವನದಲ್ಲಿತ್ತು. ಭಾರತದ ಸ್ವಾತಂತ್ರದ ಬಳಿಕ ಅದು ನೆಹರೂರ ಅಧಿಕೃತ ನಿವಾಸವಾಗಿತ್ತು. 1964ರಲ್ಲಿ ನೆಹರೂ ನಿಧನರಾದ ತಿಂಗಳುಗಳ ಬಳಿಕ, ದೇಶದ ಪ್ರಥಮ ಪ್ರಧಾನಿಯ 75ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ರಾಷ್ಟ್ರಪತಿ ಎಸ್. ರಾಧಾಕೃಷ್ಣನ್ ನೆಹರೂ ಸ್ಮಾರಕ ವಸ್ತುಸಂಗ್ರಹಾಲಯವನ್ನು ಉದ್ಘಾಟಿಸಿದ್ದರು. ಸಂಸ್ಥೆಯ ಆಡಳಿತವನ್ನು ನೋಡಿಕೊಳ್ಳಲು ಎನ್ಎಮ್ಎಮ್ಎಲ್ ಸೊಸೈಟಿಯನ್ನು ಸ್ಥಾಪಿಸಲಾಗಿತ್ತು.

2016ರಲ್ಲಿ, ದೇಶದ ಎಲ್ಲಾ ಪ್ರಧಾನಿಗಳಿಗೆ ಸಂಬಂಧಿಸಿದ ವಸ್ತುಗಳು ಮತ್ತು ಕಲಾಕೃತಿಗಳನ್ನು ಇಡುವುದಕ್ಕಾಗಿ ವಸ್ತುಸಂಗ್ರಹಾಲಯವನ್ನು ನವೀಕರಿಸಲು ಪ್ರಧಾನಿ ಮೋದಿ ನಿರ್ಧರಿಸಿದರು.

ಇದು ಪ್ರಧಾನಿಯ ಸಣ್ಣತನ, ಪ್ರತೀಕಾರ ಮನೋಭಾವ: ಕಾಂಗ್ರೆಸ್

ಈ ನಿರ್ಧಾರವು ಪ್ರಧಾನಿಯ ಸಣ್ಣತನ ಮತ್ತು ಪ್ರತೀಕಾರ ಮನೋಭಾವವನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.

‘‘ಭಾರತ ರಾಷ್ಟ್ರದ ರೂವಾರಿಯ ಹೆಸರು ಮತ್ತು ಪರಂಪರೆಯನ್ನು ತಿರುಚಲು, ಲಘುವಾಗಿಸಲು ಮತ್ತು ನಾಶಗೊಳಿಸಲು ಮೋದಿ ಏನು ಮಾಡುವುದಿಲ್ಲ’’ ಎಂದು ಅವರು ಹೇಳಿದ್ದಾರೆ. ‘‘ತನ್ನದೇ ಆಗಿರುವ ಅಭದ್ರತೆಗಳಿಂದ ಬಳಲುತ್ತಿರುವ ಅತ್ಯಂತ ಸಣ್ಣ ಮನುಷ್ಯನೊಬ್ಬ ಸ್ವಯಂಘೋಷಿತ ವಿಶ್ವಗುರು’’ ಎಂದು ಅವರು ಟ್ವಿಟರ್ ನಲ್ಲಿ ಬರೆದಿದ್ದಾರೆ.

Similar News