ಮಾಹಿತಿ ಹಕ್ಕು ಹೋರಾಟಗಾರ ನಿಗೂಢ ಸಾವು; ಮೂವರ ಬಂಧನ
ಹೈದರಾಬಾದ್: ತೆಲಂಗಾಣದ ಜನಗಾಂವ್ ಎಂಬಲ್ಲಿ ಮಾಹಿತಿ ಹಕ್ಕು ಹೋರಾಟಗಾರನ ನಿಗೂಢ ಸಾವಿನ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಭೂವ್ಯಾಜ್ಯದ ಪರಿಣಾಮ ಇವರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಅಪಹರಣ ಹಾಗೂ ಹತ್ಯೆ ಆರೋಪದಲ್ಲಿ ಮೂವರನ್ನು ಬಂಧಿಸಲಾಗಿದೆ.
ನಿವೃತ್ತ ಮಂಡಲ ಪರಿಷತ್ ಅಭಿವೃದ್ಧಿ ಅಧಿಕಾರಿಯಾಗಿದ್ದ 70 ವರ್ಷ ವಯಸ್ಸಿನ ನಲ್ಲಾ ರಾಮಕೃಷ್ಣಯ್ಯ ಅವರ ಶವ ಭಾನುವಾರ ನೀರು ತುಂಬಿದ್ದ ಕಲ್ಲಿನ ಕೋರೆಯಲ್ಲಿ ಪತ್ತೆಯಾಗಿತ್ತು. ನಾಪತ್ತೆಯಾದ ಮೂರು ದಿನಗಳ ಬಳಿಕ ಅವರ ಶವ ಕಂಡುಬಂದಿತ್ತು. ಆರ್‍ಟಿಐ ಹೋರಾಟಗಾರನ ಪುತ್ರ ಈ ಮುನ್ನ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಪ್ರಕರಣದ ಪ್ರಮುಖ ಆರೋಪಿ ಜಿ.ಅಂಜಯ್ಯ ಎಂಬಾತ ರಾಮಕೃಷ್ಣಯ್ಯ ಜತೆ ಭೂವ್ಯಾಜ್ಯ ಹೊಂದಿದ್ದ. ಈ ಬಗ್ಗೆ ಸರ್ಕಾರಿ ಅಧಿಕಾರಿಗಳಿಗೆ ರಾಮಕೃಷ್ಣಯ್ಯ ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ದ್ವೇಷ ಇತ್ತು ಎಂದು ಪೊಲೀಸರು ಹೇಳಿದ್ದಾರೆ. ಆರೋಪಿ ಬಾಡಿಗೆ ಹಂತಕರ ನೆರವು ಪಡೆದು ರಾಮಕೃಷ್ಣಯ್ಯ ಅವರನ್ನು ಹತ್ಯೆ ಮಾಡಿಸಿದ್ದಾಗಿ ಪೊಲೀಸರು ವಿವರಿಸಿದ್ದಾರೆ.
ಬಾಡಿಗೆ ಹಂತಕರು ರಾಮಕೃಷ್ಣಯ್ಯ ಅವರನ್ನು ಜೂನ್ 15ರಂದು ಪೊಚ್ಚಣ್ಣಪೇಟೆಯಿಂದ ಅಪಹರಿಸಿ, ಟವೆಲ್ ಬಳಸಿ ಉಸಿರುಗಟ್ಟಿಸಿ ಸಾಯಿಸಿದೆ. ಬಳಿಕ ನೀರು ತುಂಬಿದ್ದ ಕಲ್ಲುಕೋರೆಯಲ್ಲಿ ಶವವನ್ನು ಎಸೆದು ಪರಾರಿಯಾಗಿದ್ದರು. ಅಂಜಯ್ಯ ಹಾಗೂ ಇತರ ಇಬ್ಬರು ಬಾಡಿಗೆ ಹಂತಕರನ್ನು ಬಂಧಿಸಲಾಗಿದ್ದು, ಇತರರ ಪತ್ತೆಗೆ ಜಾಲ ಬೀಸಲಾಗಿದೆ. ಆರ್‍ಟಿಐ ಕಾರ್ಯಕರ್ತರಾಗಿದ್ದ ರಾಮಕೃಷ್ಣಯ್ಯ, ವ್ಯಾಜ್ಯದ ಸಂಬಂಧ ಸಿವಲ್ ದಾವೆಯನ್ನೂ ಹೂಡಿದ್ದರು. ಪೊಚ್ಚಣ್ಣಪೇಟೆಯಲ್ಲಿ ಅಂಜಯ್ಯ ಹೊಂದಿದ್ದ ಸರ್ಕಾರಿ ಭೂಮಿಯ ಪಟ್ಟಾ ರದ್ದುಪಡಿಸುವಂತೆ ಕೋರಿ ಮಾನವ ಹಕ್ಕು ಆಯೋಗಕ್ಕೂ ಅರ್ಜಿ ಸಲ್ಲಿಸಿದ್ದರು.