×
Ad

ಬಂಧನಕ್ಕೊಳಗಾಗಿರುವ ತಮಿಳುನಾಡು ಸಚಿವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸುಪ್ರೀಂಕೋರ್ಟ್ ಅನುಮತಿ

Update: 2023-06-21 13:21 IST

ಹೊಸದಿಲ್ಲಿ: ಬಂಧನಕ್ಕೊಳಗಾಗಿರುವ ತಮಿಳುನಾಡು ಸಚಿವ ವಿ.ಸೆಂಥಿಲ್ ಬಾಲಾಜಿ ಅವರನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಸುಪ್ರೀಂಕೋರ್ಟ್ ಇಂದು ಅನುಮತಿ ನೀಡಿದೆ. ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ಸೆಂಥಿಲ್ ಬಾಲಾಜಿ ಅವರು ಚೆನ್ನೈನ ಸರಕಾರಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ndtv.com ವರದಿ ಮಾಡಿದೆ.

ರಾಜ್ಯ ಸಾರಿಗೆ ಇಲಾಖೆಯಲ್ಲಿ ನಡೆದಿರುವ ಉದ್ಯೋಗಕ್ಕಾಗಿ ನಗದು ಹಗರಣದಲ್ಲಿ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದಡಿಯಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ಸಚಿವ ಬಾಲಾಜಿ ಸೆಂಥಿಲ್ ಅವರನ್ನು ಖಾಸಗಿ ಅಸ್ಪತ್ರೆಗೆ ಸ್ಥಳಾಂತರಿಸಲು ಅನುಮತಿ ನೀಡಿದ್ದ ಮದ್ರಾಸ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯವು ಸುಪ್ರೀಂಕೋರ್ಟ್ ಮೊರೆ ಹೋಗಿತ್ತು.

ನ್ಯಾ. ಸೂರ್ಯಕಾಂತ್ ಹಾಗೂ ನ್ಯಾ. ಎಂ.ಎಂ.ಸುಂದರೇಶ್ ಅವರನ್ನೊಳಗೊಂಡಿದ್ದ ಸುಪ್ರೀಂಕೋರ್ಟ್‌ನ ರಜಾ ಕಾಲದ ನ್ಯಾಯಪೀಠವು, ಹೈಕೋರ್ಟ್‌ನಲ್ಲಿ ಅರ್ಜಿಯ ವಿಚಾರಣೆ ಇನ್ನೂ ಬಾಕಿ ಇರುವುದರಿಂದ, ನೀವು ಹೈಕೋರ್ಟ್‌ಗೇ ಮೊರೆ ಹೋಗಿ ಎಂದು ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿದೆ.

ಅರ್ಜಿ ವಿಚಾರಣೆಯನ್ನು ಜುಲೈ 4ಕ್ಕೆ ಮುಂದೂಡಿದ ನ್ಯಾಯಪೀಠವು, "ಮಧ್ಯಂತರ ಆದೇಶದಲ್ಲಿನ ಹೈಕೋರ್ಟ್ ನಿಲುವು ಹಾಗೂ ಈ ನ್ಯಾಯಾಲಯದ ಮೌಖಿಕ ಅಭಿಪ್ರಾಯವು ಈ ಪ್ರಕರಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ" ಎಂದು ಸ್ಪಷ್ಟಪಡಿಸಿದೆ.

ಜೆ.ಜಯಲಲಿತಾ ನೇತೃತ್ವದ ಎಐಎಡಿಎಂಕೆ ಸರ್ಕಾರದ ಅವಧಿಯಲ್ಲಿ ಸಾರಿಗೆ ಸಚಿವರಾಗಿದ್ದಾಗ ಸಾರಿಗೆ ಇಲಾಖೆಯಲ್ಲಿ ನಡೆದಿತ್ತೆನ್ನಲಾದ ಉದ್ಯೋಗಕ್ಕಾಗಿ ನಗದು ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಲಿ ಇಂಧನ ಹಾಗೂ ಅಬಕಾರಿ ಸಚಿವರಾಗಿರುವ ವಿ. ಬಾಲಾಜಿ ಸೆಂಥಿಲ್ ಅವರನ್ನು ಅಕ್ರಮ ಹಣ ವರ್ಗಾವಣೆ ತಡೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಜೂನ್ 14ರಂದು ಬಂಧಿಸಿತ್ತು.

ತಮ್ಮ ಪತಿಯನ್ನು ಕಾನೂನುಬಾಹಿರವಾಗಿ ಬಂಧಿಸಲಾಗಿದೆ ಎಂದು ಬಾಲಾಜಿ ಅವರ ಪತ್ನಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಮಧ್ಯಂತರ ಆದೇಶ ಹೊರಡಿಸಿತ್ತು.

Similar News