×
Ad

ಸಂಜೀವ್‌ ಭಟ್‌ ಸೆರೆವಾಸಕ್ಕೆ 4 ವರ್ಷ: ಭಾವನಾತ್ಮಕ ಸಂದೇಶ ಹಂಚಿಕೊಂಡ ಮಾಜಿ ಅಧಿಕಾರಿಯ ಮಕ್ಕಳು

Update: 2023-06-21 20:46 IST

ಹೊಸದಿಲ್ಲಿ: ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ಬಂಧಿಸಿ ನಾಲ್ಕು ವರ್ಷಗಳು ಆಗಿರುವ ಹಿನ್ನೆಲೆಯಲ್ಲಿ ಅವರ ಮಕ್ಕಳಾದ ಆಕಾಶಿ ಮತ್ತು ಶಾಂತನು ಭಟ್ ಅವರು ತಮ್ಮ ತಂದೆಯ ನಾಲ್ಕನೇ ವರ್ಷದ ಸೆರೆವಾಸದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದಾರೆ. 

 ತಂದೆಯೊಂದಿಗಿನ ತಮ್ಮ ನೆನಪುಗಳನ್ನು ಹಂಚಿಕೊಂಡಿರುವ ಅವರು, ನ್ಯಾಯ ವ್ಯವಸ್ಥೆಯ ಮೇಲೆ ನಿರಾಶೆಯನ್ನು ವ್ಯಕ್ತಪಡಿಸಿದ್ದು, ನ್ಯಾಯಕ್ಕಾಗಿ ಹೋರಾಡುತ್ತಿರುವ ತಮ್ಮ ತಂದೆಯ ಹೋರಾಟಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಜೂನ್ 20 ರಂದು (ಸಂಜೀವ್‌ ಭಟ್‌ ಬಂಧನದ ದಿನ) ತಮ್ಮ ಜೀವನವು ಅಂತ್ಯವಿಲ್ಲದ ದುಃಸ್ವಪ್ನವಾಗಿ ಮಾರ್ಪಟ್ಟಿತು ಎಂದು ಹೇಳಿಕೊಂಡಿರುವ ಆಕಾಶಿ ಮತ್ತು ಶಾಂತನು ನ್ಯಾಯಾಲಯದ ವಿಚಾರಣೆಯನ್ನು ಉಲ್ಲೇಖಿಸಿದ್ದಾರೆ. ಇದನ್ನು ಸರ್ಕಾರದ ವಿಧ್ವಂಸಕ ಕೃತ್ಯ ಎಂದು ನಂಬುವ ಅವರು, ವಿನಾಶಕಾರಿ ವಿಚಾರಣೆಗೆ ಕಾರಣವಾಯಿತು ಹೇಳಿದ್ದಾರೆ. ತಮ್ಮ ತಂದೆಯ ಪ್ರಕರಣದಲ್ಲಿ ಸರಿಯಾದ ಪ್ರಕ್ರಿಯೆಯ ಕೊರತೆ, ಸಾಕ್ಷ್ಯವನ್ನು ಕಡೆಗಣಿಸುವಿಕೆ ಮತ್ತು ಪ್ರತಿವಾದದ ಸಾಕ್ಷಿಗಳನ್ನು ಪ್ರಸ್ತುತಪಡಿಸುವ ಅವಕಾಶವನ್ನು ನಿರಾಕರಿಸುವುದು, ಇವೆಲ್ಲವೂ ತಮ್ಮ ತಂದೆಯ ಧ್ವನಿಯನ್ನು ಮೌನಗೊಳಿಸುವ ಗುರಿಯನ್ನು ಹೊಂದಿವೆ ಎಂದು ಅವರು ಹೇಳಿದ್ದಾರೆ.

ತಮ್ಮ ತಂದೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಆಕಾಶಿ ಮತ್ತು ಶಂತನು ತಾವು ಅವರ ಮಕ್ಕಳಾಗಿರುವುದಕ್ಕೆ ಹೆಮ್ಮೆ ಪಡುವುದಾಗಿ ಹೇಳಿದ್ದಾರೆ.   

ಸಂಜೀವ್ ಭಟ್ ಅವರಿಗೆ ಕಳೆದ ನಾಲ್ಕು ವರ್ಷಗಳಿಂದ ಅನ್ಯಾಯವಾಗುತ್ತಿದೆ. ಅವರ ನ್ಯಾಯಕ್ಕಾಗಿ ಅವರ ಕುಟುಂಬವು ಹೋರಾಟವನ್ನು ಮುಂದುವರೆಸುತ್ತದೆ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

Similar News