×
Ad

ಹೊಂಡುರಾಸ್ ಜೈಲಿನಲ್ಲಿ ಭೀಕರ ಗಲಭೆ: 41 ಮಹಿಳೆಯರ ಮೃತ್ಯು

Update: 2023-06-21 23:27 IST

ತೆಗುಸಿಗಲ್ಪ: ಮಧ್ಯ ಅಮೆರಿಕದ ಹೊಂಡುರಾಸ್ ದೇಶದ ಮಹಿಳೆಯರ ಜೈಲಿನಲ್ಲಿ ಮಂಗಳವಾರ ಸಂಭವಿಸಿದ ಭೀಕರ ಗಲಭೆಯಲ್ಲಿ ಕನಿಷ್ಠ 41 ಮಹಿಳೆಯರು ಮೃತಪಟ್ಟಿರುವುದಾಗಿ ವರದಿಯಾಗಿದೆ.

ಹೊಂಡುರಾಸ್‌ನ ರಾಜಧಾನಿ ತೆಗುಸಿಗಲ್ಪದ ಸುಮಾರು 50 ಕಿ.ಮೀ. ದೂರದ ತಮಾರಾ ಜೈಲಿನಲ್ಲಿ ಮಹಿಳಾ ಕೈದಿಗಳು ಗಲಭೆ ನಡೆಸಿದ್ದು ಮೃತರಲ್ಲಿ 26 ಮಹಿಳೆಯರನ್ನು ಜೀವಂತ ಸುಟ್ಟುಹಾಕಲಾಗಿದ್ದರೆ ಇತರ 15 ಮಂದಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ‘ಮಾರ’ ಕ್ರಿಮಿನಲ್ ಗ್ಯಾಂಗ್ ಈ ಕೃತ್ಯ ನಡೆಸಿದೆ ಎಂದು ಹೊಂಡುರಾಸ್ ಅಧ್ಯಕ್ಷೆ ಕ್ಸಿಯೊಮರ ಕ್ಯಾಸ್ಟ್ರೋ ಆರೋಪಿಸಿದ್ದಾರೆ. ‘ಮಾರ’ ಕ್ರಿಮಿನಲ್‌ಗಳು ಜೈಲಿನ ಅಧಿಕಾರಿಗಳ ನೆರವಿನಿಂದ ಈ ಕೃತ್ಯ ನಡೆಸಿದ್ದು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದವರು ಎಚ್ಚರಿಸಿದ್ದಾರೆ.

‘ಬರಿಯೊ 18’ ಎಂಬ ಕ್ರಿಮಿನಲ್‌ಗಳ ಗ್ಯಾಂಗ್‌ನ ಸದಸ್ಯರು ಮತ್ತೊಂದು ಗ್ಯಾಂಗ್‌ನ ಸದಸ್ಯರನ್ನಿರಿಸಿದ ಜೈಲುಕೊಠಡಿಗೆ ನುಗ್ಗಿ ಬೆಂಕಿ ಹಚ್ಚಿದ್ದಾರೆ.

ಬೆಂಕಿಯಿಂದ ತಪ್ಪಿಸಿಕೊಳ್ಳಲು ಹೊರಗೆ ಓಡಿ ಬಂದವರನ್ನು ಗುಂಡಿಕ್ಕಿ ಹತ್ಯೆ ಮಾಡಿದೆ. ಕನಿಷ್ಠ 7 ಮಂದಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೊಂಡುರಾಸ್‌ನ ರಾಷ್ಟ್ರೀಯ ಪೊಲೀಸ್ ತನಿಖಾ ಏಜೆನ್ಸಿಯ ವಕ್ತಾರ ಯೂರಿ ಮೊರಾ ಹೇಳಿದ್ದಾರೆ.

ಗಲಭೆಯ ಬಳಿಕ ಜೈಲಿನೊಳಗೆ ನೆಲದ ಮೇಲೆ ಬಿದ್ದಿರುವ ಹಲವು ಪಿಸ್ತೂಲುಗಳು, ಕೊಡಲಿ ಸೇರಿದಂತೆ ಇತರ ಹರಿತವಾದ ಆಯುಧಗಳ ರಾಶಿಯ ವೀಡಿಯೊವನ್ನು ಮಾಧ್ಯಮಗಳು ಪ್ರಕಟಿಸಿವೆ. ಈ ಜೈಲಿನಲ್ಲಿರುವ ಮಹಿಳಾ ಕೈದಿಗಳಲ್ಲಿ ಬಹುತೇಕರು ಮಾದಕ ವಸ್ತುಗಳ ಅಕ್ರಮ ಮಾರಾಟ ಜಾಲಕ್ಕೆ ಸಂಬಂಧಿಸಿದವರು. ಕೈದಿಗಳು  ಜೈಲಿನೊಳಗೆ ಕೂಡಾ ಮಾದಕ ವಸ್ತು, ಪಿಸ್ತೂಲು ಮತ್ತಿತರ ಮಾರಕ ಆಯುಧಗಳನ್ನು ಸುಲಭವಾಗಿ ತರಿಸುತ್ತಿದ್ದಾರೆ.  ಮಾದಕ ವಸ್ತು ವಿಷಯಕ್ಕೆ ಸಂಬಂಧಿಸಿ ಜೈಲಿನಲ್ಲಿ ಹಲವು ಬಾರಿ ಘರ್ಷಣೆ ನಡೆದಿದೆ ಎಂದು ವರದಿಯಾಗಿದೆ.

Similar News