Australia | ‘ನನ್ನ ಮಗ ಒಬ್ಬ ಹೀರೋ, ಆತ ಜಾತಿ ಧರ್ಮ ನೋಡಲಿಲ್ಲ": ಅಹ್ಮದ್ ತಂದೆ Mohamed Fateh al-Ahmed
ಪ್ರಾಣವನ್ನು ಲೆಕ್ಕಿಸದೆ ದಾಳಿಕೋರನಿಂದ ಬಂದೂಕು ಕಸಿದುಕೊಂಡು, ಜನರನ್ನು ರಕ್ಷಿಸಿದ್ದ ಸಿರಿಯಾ ಮೂಲದ ಹಣ್ಣಿನ ವ್ಯಾಪಾರಿ
photo: ndtv
ಸಿಡ್ನಿ: ಬೋಂಡಿ ಬೀಚ್‌ನಲ್ಲಿ ನಡೆದ ಗುಂಡಿನ ದಾಳಿಯ ವೇಳೆ ಗುಂಡು ಹಾರಿಸುತ್ತಿದ್ದ ದಾಳಿಕೋರನನ್ನು ಎದುರಿಸಿ ಆತನಿಂದ ಬಂದೂಕನ್ನು ಕಸಿದುಕೊಂಡ ಅಹ್ಮದ್ ಅಲ್–ಅಹ್ಮದ್ ಅವರ ಸಾಹಸ ನಡೆಗೆ, ಆಸ್ಟ್ರೇಲಿಯಾದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.
ಈ ವೇಳೆ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಹ್ಮದ್ ಬಗ್ಗೆ ಅವರ ಕುಟುಂಬದವರು, “ಅವರು ಆತ್ಮಸಾಕ್ಷಿಯ ಮಾತು ಕೇಳಿದರು” ಎಂದು ಪ್ರತಿಕ್ರಿಯಿಸಿದ್ದಾರೆ.
“ನನ್ನ ಮಗ ಒಬ್ಬ ಹೀರೋ. ಜನರನ್ನು ರಕ್ಷಿಸುವ ಉತ್ಸಾಹ ಅವನ ರಕ್ತದಲ್ಲೇ ಇದೆ” ಎಂದು ಅಹ್ಮದ್ ಅವರ ತಂದೆ Mohamed Fateh al-Ahmed ಹೇಳಿದ್ದಾರೆ. ಸಿರಿಯನ್ ಮೂಲದ ಆಸ್ಟ್ರೇಲಿಯನ್ ಪ್ರಜೆ ಆಗಿರುವ ಅಹ್ಮದ್ 2006ರಲ್ಲಿ ಆಸ್ಟ್ರೇಲಿಯಾಗೆ ವಲಸೆ ಬಂದಿದ್ದು, ಹಿಂದೆ ಪೊಲೀಸ್ ಸೇವೆಯಲ್ಲಿಯೂ ಕಾರ್ಯನಿರ್ವಹಿಸಿದ್ದರು. ಕೆಲ ತಿಂಗಳುಗಳ ಹಿಂದಷ್ಟೇ ಅವರ ಪೋಷಕರು ಸಿರಿಯಾದಿಂದ ಸಿಡ್ನಿಗೆ ಆಗಮಿಸಿದ್ದರು.
ಗುಂಡಿನ ದಾಳಿ ನಡೆಯುತ್ತಿದ್ದಾಗ ಜನರು ಗುಂಡೇಟಿಗೆ ಬಲಿಯಾಗುತ್ತಿರುವುದನ್ನು ಕಂಡ ಅಹ್ಮದ್, ಅಪಾಯವನ್ನು ಲೆಕ್ಕಿಸದೇ ದಾಳಿಕೋರನನ್ನು ಎದುರಿಸಿದರು. ಆತನಿಂದ ಬಂದೂಕನ್ನು ಕಸಿದುಕೊಂಡ ಕ್ಷಣದಲ್ಲಿ ಅವರಿಗೆ ಗುಂಡೇಟು ತಗುಲಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. “ಆ ದೃಶ್ಯವನ್ನು ನನಗೆ ನೋಡಲಾಗಲಿಲ್ಲ. ದೇವರು ನನಗೆ ಶಕ್ತಿ ನೀಡಿದನು. ಈ ವ್ಯಕ್ತಿ ಜನರನ್ನು ಕೊಲ್ಲುವುದನ್ನು ನಿಲ್ಲಿಸಬೇಕೆಂದು ನಿರ್ಧರಿಸಿದೆ” ಎಂದು ಅಹ್ಮದ್ ತಮ್ಮ ಸಂಬಂಧಿಗೆ ತಿಳಿಸಿದ್ದಾರೆ ಎಂದು ಕುಟುಂಬದವರು ಹೇಳಿದ್ದಾರೆ.
ಮಗನಿಗೆ ಗುಂಡು ತಗುಲಿದ ಸುದ್ದಿ ತಿಳಿದಾಗ ತೀವ್ರ ಆಘಾತಕ್ಕೆ ಒಳಗಾದ ಅಹ್ಮದ್ ಅವರ ತಾಯಿ Malakeh Hasan al-Ahmed, “ನಾನು ನನ್ನನ್ನೇ ಹೊಡೆದುಕೊಂಡು ಅಳುತ್ತಿದ್ದೆ. ಆದರೆ ಜನರ ಜೀವ ಉಳಿಸಲು ಅವನು ಮಾಡಿದ ಧೈರ್ಯ ನನಗೆ ಹೆಮ್ಮೆಯ ವಿಷಯ” ಎಂದು ಹೇಳಿದರು.
ಅಹ್ಮದ್ ತಾವು ಮಾಡಿದ ಕಾರ್ಯದಲ್ಲಿ ಯಾರ ಜಾತಿ, ಧರ್ಮ ಅಥವಾ ರಾಷ್ಟ್ರೀಯತೆಯನ್ನೂ ಪರಿಗಣಿಸಲಿಲ್ಲ ಎಂದು ಅವರ ತಂದೆ Mohamed Fateh al-Ahmed ಸ್ಪಷ್ಟಪಡಿಸಿದರು. “ಅವನು ಯಾರ ಬಗ್ಗೆಯೂ ಭೇದ ಭಾವ ಇಲ್ಲ. ಆಸ್ಟ್ರೇಲಿಯಾದಲ್ಲಿ ಒಬ್ಬ ನಾಗರಿಕ ಮತ್ತು ಮತ್ತೊಬ್ಬ ನಾಗರಿಕರ ನಡುವೆ ಯಾವುದೇ ಭೇದವಿಲ್ಲ ಎಂಬ ನಂಬಿಕೆ ಅವನದು” ಎಂದರು.
ಸಿರಿಯನ್ ಸಮುದಾಯವೂ ಅಹ್ಮದ್ ಅವರ ಸಾಹಸ ನಡೆಗೆ ಹೆಮ್ಮೆ ವ್ಯಕ್ತಪಡಿಸಿದೆ. Australians for Syria Associationನ ಮಾಧ್ಯಮ ವಿಭಾಗದ ನಿರ್ದೇಶಕಿ Lubaba Alhmidi Alkahil ಮಾತನಾಡಿ, “ದಾಳಿಗಳ ಬಳಿಕ ಮುಸ್ಲಿಮರ ಮೇಲೆ ತಪ್ಪು ಆರೋಪಗಳು ಬರುವ ಆತಂಕ ಇರುತ್ತದೆ. ಆದರೆ ಅಹ್ಮದ್ ಅವರ ನಡೆ ಮಾನವೀಯತೆಯ ನಿಜವಾದ ಮುಖವನ್ನು ಜಗತ್ತಿಗೆ ತೋರಿಸಿದೆ” ಎಂದರು.