×
Ad

ಉಗ್ರರ ದಾಳಿ ಹಿನ್ನೆಲೆ; ತಿಂಗಳ ಬಳಿಕವೂ ಪಹಲ್ಗಾಮ್ ನಿರ್ಜನ!

Update: 2025-05-23 07:48 IST

PC: x.com/Anitharaamz

ಪಹಲ್ಗಾಮ್: ಮೇ ತಿಂಗಳ ಬೆಚ್ಚಗಿನ ಮುಂಜಾನೆ ಪಹಲ್ಗಾಮ್ ನ ಹೋಟೆಲ್ ಒಂದರ ಖಾಲಿ ಟೇಬಲ್ ಮುಂದೆ ಗ್ರಾಹಕರ ನಿರೀಕ್ಷೆಯಲ್ಲಿ ರಸ್ತೆಯತ್ತ ನೋಟ ಬೀರುತ್ತಾ ಮೋಹಿತ್ ಕುಮಾರ್ ನಿಂತಿದ್ದರು. ಕಳೆದ ತಿಂಗಳ ವರೆಗೂ ಉತ್ತರ ಪ್ರದೇಶದ ಬಿಜ್ನೋರ್ ಮೂಲದ 38 ವರ್ಷ ವಯಸ್ಸಿನ ಮೋಹಿತ್ ಹಾಗೂ 21 ಮಂದಿ ಸಹೋದ್ಯೋಗಿಗಳು ಜನಜಂಗುಳಿಯಿಂದ ಕೂಡಿದ ರೆಸ್ಟೋರೆಂಟ್ ನಲ್ಲಿ ಗ್ರಾಹಕರಿಗೆ ಪ್ರೀತಿಯಿಂದ ಆಹಾರ ವಿತರಿಸುತ್ತಿದ್ದರು.

ಇದು ಕೇವಲ ಮೋಹಿತ್ ಕುಮಾರ್ ಅವರು ಕೆಲಸ ನಿರ್ವಹಿಸುವ ಪೂನಮ್ ರೆಸ್ಟೋರೆಂಟ್ ನ ಅವಸ್ಥೆಯಲ್ಲ. ಏಪ್ರಿಲ್ 22ರಂದು ಉಗ್ರರ ದಾಳಿ ನಡೆದ ಒಂದು ತಿಂಗಳ ಬಳಿಕವೂ ಆಕರ್ಷಕ ಪ್ರವಾಸಿ ತಾಣ ನಿರ್ಜನವಾಗಿದ್ದು, ವ್ಯಾಪಾರ ವಹಿವಾಟುಗಳು ಅಕ್ಷರಶಃ ಸ್ಥಗಿತಗೊಂಡಿವೆ. ಇಡೀ ಪ್ರದೇಶದಲ್ಲಿ ನೀರವ ಮೌನ ಆವರಿಸಿದೆ.

"ಪಹಲ್ಗಾಮ್ ನಮ್ಮ ಪಾಲಿಗೆ ಮಿನಿ ಭಾರತ" ಎಂದು ಮೋಹಿತ್ ಹೇಳುತ್ತಾರೆ. ಅವರಂತೆ 14 ಮಂದಿ ಸಪ್ಲೈಯರ್ ಗಳು ತಮ್ಮ ಉದ್ಯೋಗದಲ್ಲಿ ಮುಂದುವರಿದಿದ್ದಾರೆ. "ರೆಸ್ಟೋರೆಂಟ್ ಮೊದಲು ತೆರೆದವರು ನಾವು. ಈ ಭಾಗದಲ್ಲಿ ಪ್ರವಾಸೋದ್ಯಮ ಮತ್ತೆ ದೊಡ್ಡದಾಗಿ ಚಿಗುರಲಿದೆ ಎಂಬ ನಿರೀಕ್ಷೆ ನಮ್ಮದು. ಆದರೆ ಇಂದಿನ ಪರಿಸ್ಥಿತಿ ಹೇಗಿದೆ ಎಂದರೆ ಕಾಶ್ಮೀರಿಗಳು ಕೂಡಾ ಪಹಲ್ಗಾಮ್ ಗೆ ಭೇಟಿ ನೀಡುವುದಿಲ್ಲ" ಎಂದರು.

ಪೂನಮ್ ರೆಸ್ಟೋರೆಂಟ್ ಮಾಲೀಕರಾದ ಮುಹಮ್ಮದ್ ತಸ್ನೀಮ್ ಅವರು ಪಹಲ್ಗಾಮ್ ನ ಪ್ರವಾಸೋದ್ಯಮ ವಲಯದ ಮುಂದಿನ ಸೀಸನ್ ಗೆ ಸಜ್ಜಾಗುತ್ತಿದ್ದಾರೆ. "ದೀಪಾವಳಿ ವೇಳೆಗೆ ಪ್ರವಾಸಿಗರು ಹೆಚ್ಚುವ ನಿರೀಕ್ಷೆ ನಮ್ಮದು. ಮೂರು ದಶಕಗಳಲ್ಲೇ ಅತ್ಯಂತ ಕೆಟ್ಟದಿನಗಳನ್ನು ನಾವು ಎದುರಿಸುತ್ತಿದ್ದೇವೆ ಹಾಗೂ ಇದನ್ನೂ ನಾವು ಯಶಸ್ವಿಯಾಗಿ ದಾಟುವ ಭರವಸೆಯಲ್ಲಿದ್ದೇವೆ" ಎಂದು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News