ಬಾಗಲಕೋಟೆ | ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ: ಆರೋಪಿಯ ಬಂಧನ
ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಏಳು ಮಂದಿಯ ಬಂಧನ: ಎಸ್ಪಿ
ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್
ಬಾಗಲಕೋಟೆ: ಮರಾಠಾ ಹಿತ ಚಿಂತಕರ ಸಂಘದ ಆಶ್ರಯದಲ್ಲಿ ಗುರುವಾರ ಸಂಜೆ ನಗರದಲ್ಲಿ ಆಯೋಜಿಸಿದ್ದ ಶಿವಾಜಿ ಜಯಂತಿ ಮೆರವಣಿಗೆ ವೇಳೆ ವೇಳೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ತಿಳಿಸಿದ್ದಾರೆ.
ತಂಝೀರ್(28) ಬಂಧಿತ ಆರೋಪಿ. ಈತ ಮಸೀದಿ ಹೊರಗೆ ಇಟ್ಟಿರುವ ಶೂ ರ್ಯಾಕ್ (Shoe Rack) ಅಡಿಗೆ ಇರಿಸಿದ್ದ ಎರಡು ಕಲ್ಲುಗಳನ್ನು ಎಸೆದಿದ್ದಾನೆ. ಈ ಕಲ್ಲು ಪೊಲೀಸರ ಮೇಲೆ ಮತ್ತು ಸಾರ್ವಜನಿಕರೊಬ್ಬರ ಮೇಲೆ ಬಿದ್ದಿದೆ. ಕಲ್ಲೆಸೆತದಿಂದ ಯಾವುದೇ ಗಾಯಗಳಾಗಿಲ್ಲ ಎಂದು ಎಸ್ಪಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಕಲ್ಲು ತೂರಾಟ ಕೃತ್ಯವು ಮೆರವಣಿಗೆ ಮಸೀದಿ ಬಳಿ ತಲುಪುವ ಮೊದಲೇ ನಡೆದಿದೆ. ಒಬ್ಬನೇ ಈ ಕೃತ್ಯ ಎಸಗಿದ್ದಾನೆ. ಬೇರೇ ಯಾರೂ ಈ ಕೃತ್ಯದಲ್ಲಿ ಭಾಗಿಯಾಗಿಲ್ಲ. ಇದು ಪೂರ್ವ ಯೋಜಿತ ಕೃತ್ಯವಾಗಿರಲಿಲ್ಲ ಮತ್ತು ಡಿಜೆ ವಿಚಾರಕ್ಕಾಗಿಯಾಗಿ ಕಲ್ಲು ತೂರಾಟ ನಡೆದಿಲ್ಲ ಎಂದು ಎಸ್ಪಿ ಸ್ಪಷ್ಟಪಡಿಸಿದರು.
ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಏಳು ಮಂದಿಯ ಬಂಧನ
ಕಲ್ಲು ತೂರಾಟ ನಡೆದಿರುವ ಸಂದರ್ಭ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.