Bagalkot | ಜಮಖಂಡಿಯಲ್ಲಿ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿ; 2 ವರ್ಷದ ಮಗು ಸೇರಿ ನಾಲ್ವರು ಮೃತ್ಯು, ಹಲವರಿಗೆ ಗಾಯ
ಬಾಗಲಕೋಟೆ: ಕಬ್ಬು ಕತ್ತರಿಸುವ ಕಾರ್ಮಿಕರನ್ನು ಹೊತ್ತು ಸಾಗುತ್ತಿದ್ದ ಟ್ರ್ಯಾಕ್ಟರ್ ನ ಟ್ರಾಲಿ ತುಂಡಾಗಿ ಪಲ್ಟಿಯಾದ ಪರಿಣಾಮ 2 ವರ್ಷದ ಮಗು ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಜಮಖಂಡಿ ನಗರದ ಕಟ್ಟೆ ಕೆರೆ ಸಮೀಪ ಶನಿವಾರ ಬೆಳಗ್ಗಿನ ಜಾವ 2 ಗಂಟೆಯ ವೇಳೆ ಸಂಭವಿಸಿದೆ.
ಮೃತರನ್ನು ಮನೀಷ್ ಪಾಂಡೆ (23), ಹಲಕಿ ಪಾಂಡೆ (2), ಲಕ್ಷ್ಮಿ ಚಿರಮಡಿ (27) ಹಾಗೂ ರೇಖಾ ಭೂಕೆ ಎಂದು ಗುರುತಿಸಲಾಗಿದೆ. ಇವರು ಮಹಾರಾಷ್ಟ್ರ ರಾಜ್ಯದ ಯುವತ್ಮಾಳ್ ಜಿಲ್ಲೆಯ ಬೂಸಾ ತಾಲ್ಲೂಕಿನ ಗುಪವಾಡಿ ನಿವಾಸಿಗಳೆಂದು ತಿಳಿದುಬಂದಿದೆ.
ಚಾಲಕನ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ಕಂದಕಕ್ಕೆ ಬಿದ್ದು ಟ್ರಾಲಿ ಪಲ್ಟಿಯಾಗಿದ್ದು, ಪರಿಣಾಮವಾಗಿ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದಾರೆ. 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಜಮಖಂಡಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.