ಬಾಗಲಕೋಟೆ ಗಲಭೆ ಸ್ಥಳಕ್ಕೆ ಸತ್ಯ ಶೋಧನಾ ಸಮಿತಿ ಭೇಟಿ, ಪರಿಶೀಲನೆ
ಬಾಗಲಕೋಟೆ : ಬಾಗಲಕೋಟೆ ಗಲಭೆ ಸ್ಥಳಕ್ಕೆ ಸತ್ಯ ಶೋಧನಾ ಸಮಿತಿ ಭೇಟಿ ನೀಡಿ, ಘಟನೆ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿದ್ದು, ಈ ಬಗ್ಗೆ ವರದಿ.ಯನ್ನು ಸಿಎಂಗೆ ನೀಡಲು ನಿರ್ಧರಿಸಿದೆ.
ಉಪ ಚುನಾವಣೆ ಹಿನ್ನಲೆಯಲ್ಲಿ ಕೋಮು ಭಾವನೆ ಗೆ ಕುಮಕ್ಕು ನೀಡಲಾಗಿದೆ ಎಂಬ ಅಂಶವನ್ನು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ ಎಂದು ಸಮಿತಿಯವರು ತಿಳಿಸಿದ್ದಾರೆ.
ಬೆಂಗಳೂರು ಜನಶಕ್ತಿ ಪತ್ರಿಕೆಯ ವರದಿಗಾರ ರಾಮಕೃಷ್ಣ, ಧಾರವಾಡದ ಮೇ ಸಾಹಿತ್ಯ ವತಿಯಿಂದ ಬಸವರಾಜ ಸೂಳಿಭಾವಿ, ಮುತ್ತು ಬಿಳಿಎಲೆ, ಪ್ರೊ.ಕಾಶಿನಾಥ ಅಂಬಲಿಗಿ, ಡಾ.ಮೀನಾಕ್ಷಿ ಬಾಳಿ, ಕೆ.ನೀಲಾ, ಮೆಹರಾಜ್ ಪಟೇಲ್, ಜೆ.ಎಸ್. ಪಾಟೀಲ ಹಾಗೂ ಮಾನವ ಬಂಧುತ್ವ ವೇದಿಕೆಯ ಪ್ರಭುಗೌಡ ಸೇರಿದಂತೆ ಸತ್ಯ ಶೋಧನಾ ಸಮಿತಿಯ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಲಾಯಿತು
ಕೆಲವರು ಪಂಕಾ ಮಸೀದಿ ಬಳಿ ಸುಮಾರು 40 ನಿಮಿಷಗಳ ಕಾಲ ಉದ್ರಿಕ್ತ ವಾತಾವರಣ ಸೃಷ್ಟಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದರು. ಎಸ್‌ಪಿ ಅವರು 20 ನಿಮಿಷ ಮಾತ್ರ ಗಲಾಟೆ ನಡೆದಿದೆ ಎಂದು ಹೇಳಿದರೂ, ಸ್ಥಳೀಯರ ಪ್ರಕಾರ ಹೆಚ್ಚು ಸಮಯ ಗಲಾಟೆ ನಡೆದಿದೆ ಎನ್ನಲಾಗಿದೆ. ಮಸೀದಿ ಎದುರು ಜಾಗದಲ್ಲಿ ಹಾಡು ಹಾಕಿ ಕುಣಿದು, ಪ್ರಚೋದನಕಾರಿ ವರ್ತನೆ ತೋರಲಾಗಿದೆ ಎಂದು ದೂರಲಾಗಿದೆ.
ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ ಕೆಲವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ರಾತ್ರಿ ವೇಳೆ ತರಕಾರಿ ತಳ್ಳುಗಾಡಿಗೆ ಬೆಂಕಿ ಹಚ್ಚಿರುವ ಘಟನೆ ಹಾಗೂ ಮರುದಿನ ಬೆಳಗ್ಗೆ ಅಂಗಡಿ ಬಂದ್ ಮಾಡಿಸಲು ಯುವಕರ ಗುಂಪು ಕಲ್ಲು ತೂರಿದ ಪ್ರಕರಣಗಳೂ ನಡೆದಿವೆ ಎಂದು ತಿಳಿದುಬಂದಿದೆ. ಈ ಸಂಬಂಧವೂ ಕೆಲವರನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ಹೇಳಿದ್ದಾರೆ.
ಘಟನೆ ತಡೆಯುವಲ್ಲಿ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ವಿಫಲವಾಗಿದೆ ಎಂದು ಸಮಿತಿ ಆರೋಪಿಸಿದೆ. ವಯೋವೃದ್ಧರ ವಿರುದ್ಧ ಅವಾಚ್ಯ ಶಬ್ದ ಬಳಕೆ ಸೇರಿದಂತೆ ಹಲವು ಘಟನೆಗಳು ನಡೆದಿದ್ದರೂ, ಸೂಕ್ತ ಕ್ರಮ ಕೈಗೊಳ್ಳಲಿಲ್ಲ ಎಂದು ಡಾ.ಮೀನಾಕ್ಷಿ ಬಾಳಿ ಆರೋಪಿಸಿದರು.
ಉಪಚುನಾವಣೆ ಹಿನ್ನೆಲೆ ರಾಜಕೀಯ ಉದ್ದೇಶದಿಂದ ವಾತಾವರಣ ಕೆಡಿಸಲಾಗಿದೆ ಎಂದು ಸಮಿತಿ ಸದಸ್ಯರು ಆರೋಪಿಸಿದರು. ರಾತ್ರಿ ಮೆರವಣಿಗೆಗೆ ಅನುಮತಿ ನೀಡಿದ ಕುರಿತು ಪ್ರಶ್ನಿಸಿದಾಗ, ಹಿಂದೆಯೂ ರಾತ್ರಿ ಮೆರವಣಿಗೆ ನಡೆದಿತ್ತು ಎಂದು ಎಸ್‌ಪಿ ಉತ್ತರಿಸಿದ್ದಾರೆ ಎನ್ನಲಾಗಿದೆ.
ಕೆಲವರ ಪ್ರಚೋದನಕಾರಿ ಹೇಳಿಕೆಗಳ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ ಎಂಬ ಆಕ್ಷೇಪವೂ ಕೇಳಿಬಂದಿದೆ. ಶಾಂತಿ ಸಭೆ ನಡೆಸುವಂತೆ ಮನವಿ ಮಾಡಿದರೂ, ಆಡಳಿತ ಸಮರ್ಪಕವಾಗಿ ಪ್ರತಿಕ್ರಿಯಿಸಿಲ್ಲ ಎಂದು ಸಮಿತಿ ದೂರಿದೆ.
ಸತ್ಯ ಶೋಧನಾ ಸಮಿತಿ ಸಂಪೂರ್ಣ ವರದಿ ಸಿದ್ಧಪಡಿಸಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಸಲ್ಲಿಸುವುದಾಗಿ ತಿಳಿಸಿದೆ. ಘಟನೆ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಹಾಗೂ ಶಾಂತಿ ಕಾಪಾಡಲು ದಕ್ಷ ಅಧಿಕಾರಿಗಳನ್ನು ನೇಮಿಸಬೇಕು ಎಂದು ಒತ್ತಾಯಿಸಿದೆ.