×
Ad

ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ: ಬಾಗಲಕೋಟೆ ನಗರದಲ್ಲಿ ನಿಷೇಧಾಜ್ಞೆ ಜಾರಿ

Update: 2026-02-20 10:32 IST

ಬಾಗಲಕೋಟೆ: ಶಿವಾಜಿ ಜಯಂತಿಯ ಹಿನ್ನೆಲೆಯಲ್ಲಿ ಗುರುವಾರ ಸಂಜೆ ನಡೆದ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ ಬಾಗಲಕೋಟೆ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಬಾಗಲಕೋಟೆ ಶಹರ, ನವನಗರ ಹಾಗೂ ವಿದ್ಯಾಗಿರಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಬಾಗಲಕೋಟೆ ನಗರದಲ್ಲಿ ಉಂಟಾದ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಬಾಗಲಕೋಟೆ ಶಹರ, ನವನಗರ ಹಾಗೂ ವಿದ್ಯಾಗಿರಿಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ–2023ರ ಕಲಂ 163ರಡಿಯಲ್ಲಿ ಫೆಬ್ರವರಿ 19ರ ಮಧ್ಯರಾತ್ರಿಯಿಂದ ಫೆಬ್ರವರಿ 24ರ ಮಧ್ಯರಾತ್ರಿ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಸಹಾಯಕ ಆಯುಕ್ತ ಹಾಗೂ ಉಪವಿಭಾಗೀಯ ದಂಡಾಧಿಕಾರಿ ಸಂತೋಷ ಬಿ. ಜಗಲಾಸರ ಆದೇಶ ಹೊರಡಿಸಿದ್ದಾರೆ.

ಈ ಅವಧಿಯಲ್ಲಿ ಬಾಗಲಕೋಟೆ ಶಹರ, ನವನಗರ ಮತ್ತು ವಿದ್ಯಾಗಿರಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪಾಗಿ ಸೇರುವುದನ್ನು, ಅಪಾಯಕಾರಿ ಶಸ್ತ್ರಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು ಹಾಗೂ ಅನುಮತಿ ಇಲ್ಲದೆ ಯಾವುದೇ ಸಭೆ, ಸಮಾರಂಭ, ಧರಣಿ ನಡೆಸುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.

ಮೆರವಣಿಯಲ್ಲಿದ್ದವರ ಮೇಲೆ ಕಲ್ಲು ಬಿದ್ದಿಲ್ಲ: ಎಸ್ಪಿ

ಮೆರವಣಿಗೆ ವೇಳೆ ಎರಡು ಕಲ್ಲು ತೂರಿ ಬಂದಿದ್ದು ನಿಜ. ಆದರೆ ಕಲ್ಲಿನಿಂದ ಮೂರ್ತಿಗೆ ಅಥವಾ ಮೆರವಣಿಗೆಯಲ್ಲಿದ್ದವರಿಗೆ ತೊಂದರೆ ಆಗಿಲ್ಲ ಮೆರವಣಿಗೆಗೆ ಬಂದೋಬಸ್ತ್ ಕಲ್ಪಿಸಿದ್ದ ಪೊಲೀಸರ ಮೇಲೆ ಕಲ್ಲು ಬಿದ್ದಿದ್ದು ಏನು ಆಗಿಲ್ಲ. ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿ ವೀಡಿಯೊ ವೀಕ್ಷಿಸಿ ಕಿಡಿಗೇಡಿಗಳನ್ನು ಪತ್ತೆಹಚ್ಚಲಾಗುವುದು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗಿವುದು ಎಂದು ಎಸ್ಪಿ ಸಿದ್ದಾರ್ಥ ಗೋಯಲ್ ತಿಳಿಸಿದ್ದಾರೆ.

ಘಟನೆ ಹಿನ್ನೆಲೆ: ಮರಾಠಾ ಹಿತ ಚಿಂತಕರ ಸಂಘದ ಆಶ್ರಯದಲ್ಲಿ ಗುರುವಾರ ಸಂಜೆ ಕಿಲ್ಲಾ ಅಂಬಾ ಭವಾನಿ ದೇವಸ್ಥಾನದಿಂದ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆ ನಗರ ಪ್ರಮುಖ ಮಾರ್ಗಗಳಲ್ಲಿ ಸಾಗಿತು. ಮೆರವಣಿಗೆಯ ಮಧ್ಯೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ಅದು ಪೊಲೀಸರ ಮೇಲೆ ಬಿದ್ದಿದೆ. ಈ ವಿಷಯ ಬಹಿರಂಗವಾಗುತ್ತಲೇ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News