ರೀಲ್ಸ್ ಮೂಲಕ ಕಾನೂನು ಸಲಹೆ; ಐವರು ವಕೀಲರ ಸನ್ನದು ಅಮಾನತು ಆದೇಶ ಹಿಂಪಡೆದ ಕೆಎಸ್‌ಬಿಸಿ
ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ರೀಲ್ಸ್ ಮೂಲಕ ಕಾನೂನು ಸಲಹೆ ನೀಡುವ ನೆಪದಲ್ಲಿ ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗಿದ್ದ ಮತ್ತು ವೃತ್ತಿ ಘನತೆಗೆ ಅಪಚಾರ ಎಸಗಿದ ಆರೋಪದ ಮೇಲೆ ಒಬ್ಬರು ಮಹಿಳೆ ಸೇರಿ ಐವರು ವಕೀಲರ ಸನ್ನದು ಅಮಾನತುಗೊಳಿಸಿದ್ದ ಆದೇಶವನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್‌ಬಿಸಿ) ಹಿಂಪಡೆದಿದೆ.
ಕೆಎಸ್‌ಬಿಸಿ ನಡೆಸಿದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಪರಿಷತ್ ಅಧ್ಯಕ್ಷ ವಿ.ಡಿ. ಕಾಮರಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಂತೆಯೇ, ಪರಿಷತ್ ವಿರುದ್ಧ ಮತ್ತು ಹಾಲಿ ವಿಚಾರದ ಕುರಿತು ಪರ-ವಿರೋಧ ಆರೋಪ ಮಾಡಲು ಯಾವುದೇ ವಕೀಲರು ಸಾಮಾಜಿಕ ಮಾಧ್ಯಮಗಳನ್ನು ಬಳಕೆ ಮಾಡಕೂಡದು. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಸೂಕ್ತ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಕಾಮರಡ್ಡಿ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುವ ಮೂಲಕ ಕಾನೂನು ಸಲಹೆಗಳನ್ನು ನೀಡುತ್ತಿದ್ದ ಆರೋಪದಲ್ಲಿ ವಕೀಲರಾದ ಬೆಂಗಳೂರಿನ ವಿನಯ್‌ಕುಮಾರ್, ಜಿ. ಮಂಜುನಾಥ್ ಮತ್ತು ರೇಣುಕಾ ದೇವಿ ಅಲಿಯಾಸ್ ರೇಣುಕಾ ಹಿರೇಮಠ, ಮೈಸೂರಿನ ವಿ. ರವಿಕುಮಾರ್ ಮತ್ತು ಹುಣಸೂರಿನ ಎನ್. ಪುಟ್ಟೇಗೌಡ ಅವರ ಸನ್ನದನ್ನು ಅಮಾನತುಗೊಳಿಸಿ ವಕೀಲರ ಪರಿಷತ್ ಇತ್ತೀಚೆಗೆ ನಿರ್ಣಯ ಕೈಗೊಂಡಿತ್ತು.