Bengaluru | ದ್ವಿಚಕ್ರ ವಾಹನದಿಂದ ಬಿದ್ದು ಆರು ವರ್ಷದ ಬಾಲಕಿ ಮೃತ್ಯು
ಬೆಂಗಳೂರು 5: ತಂದೆಯೊಂದಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಆರು ವರ್ಷದ ಬಾಲಕಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ವಿಜಯನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಂದಿನಿ ಲೇಔಟ್ ನಿವಾಸಿ ಪರಮೇಶ್ವರ್ ಎಂಬುವರ ಪುತ್ರಿ ಹಾರಿಕಾ(6) ಮೃತಪಟ್ಟ ಬಾಲಕಿ ಎಂದು ಗುರುತಿಸಲಾಗಿದೆ. ಪರಮೇಶ್ವರ್ ಅವರು ಬುಧವಾರ(ಜ.14) ಸಂಜೆ 6 ಗಂಟೆ ಸುಮಾರಿನಲ್ಲಿ ಮಗಳು ಹಾರಿಕಾಳನ್ನು ದ್ವಿಚಕ್ರ ವಾಹನದ ಹಿಂಬದಿ ಕೂರಿಸಿಕೊಂಡು ವೆಸ್ಟ್ ಆಫ್ ಕಾರ್ಡ್ ರಸ್ತೆಯ ಶಿವನಹಳ್ಳಿ ಡೌನ್ ರ್ಯಾಂಪ್ ಬಳಿ ಹೋಗುತ್ತಿದ್ದಾಗ ಬ್ರೇಕ್ ಹಾಕಿದ್ದಾರೆ.
ಆ ವೇಳೆ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಬಾಲಕಿ ಗಂಭೀರ ಗಾಯಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿದರಾದರೂ ರಾತ್ರಿ 9 ಗಂಟೆ ಸುಮಾರಿನಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ. ಈ ಬಗ್ಗೆ ವಿಜಯನಗರ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.