Bengaluru | ರಸ್ತೆಯಲ್ಲಿ ತೆರೆದಿದ್ದ ಕಾಂಕ್ರಿಟ್ ಚೇಂಬರ್‌ಗೆ ಬಿದ್ದು ಬಾಲಕ ಮೃತ್ಯು
ಸಾಂದರ್ಭಿಕ ಚಿತ್ರ
ಬೆಂಗಳೂರು : ಬೆಂಗಳೂರಿನ ಕನಕಪುರ ಮಾರ್ಗದ ಪೈಪ್‍ಲೈನ್ ರಸ್ತೆಯಲ್ಲಿ ತೆರೆದಿದ್ದ ಕಾಂಕ್ರೀಟ್ ಚೇಂಬರ್‌ಗೆ ಬಿದ್ದು 9ನೇ ತರಗತಿಯ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪ್ರೀತಂ (14) ಎಂಬಾತ ಮೃತ ಬಾಲಕ ಎಂದು ಗುರುತಿಸಲಾಗಿದೆ. ಮೂಲತಃ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ರಜನಿಕಾಂತ್ ಮತ್ತು ಪುಷ್ಪಾ ದಂಪತಿಯ ಪುತ್ರ ಪ್ರೀತಂ, ಜ.28ರ ಬೆಳಗ್ಗೆ 9 ಗಂಟೆಗೆ ಮನೆಯಿಂದ ಆಟವಾಡಲು ಹೊರ ಹೋಗಿದ್ದ. ಆದರೆ, ಸಂಜೆಯಾದರೂ ಮಗ ಮನೆಗೆ ಬಾರದಿದ್ದಾಗ ಆತಂಕಗೊಂಡ ಪೋಷಕರು ಎಲ್ಲೆಡೆ ಹುಡುಕಾಟ ನಡೆಸಿದ್ದರು. ಬಳಿಕ ಮಗ ಕಾಣೆಯಾದ ಬಗ್ಗೆ ಕಗ್ಗಲೀಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಬಾಲಕ ನಾಪತ್ತೆಯಾದ ಮೂರು ದಿನಗಳ ನಂತರ, ಅಂದರೆ ಜ.31ರ ಶನಿವಾರ ರಾತ್ರಿ ಪೈಪ್‍ಲೈನ್ ರಸ್ತೆಯಲ್ಲಿರುವ ಜಲಮಂಡಳಿಯ ಚೇಂಬರ್‍ನಿಂದ ತೀವ್ರವಾದ ಕೊಳೆತ ವಾಸನೆ ಬರಲಾರಂಭಿಸಿದೆ. ಇದರಿಂದ ಅನುಮಾನಗೊಂಡ ಸ್ಥಳೀಯರು ಚೇಂಬರ್ ಒಳಗೆ ಇಣುಕಿ ನೋಡಿದಾಗ ಬಾಲಕನ ಶವ ತೇಲುತ್ತಿರುವುದು ಕಂಡುಬಂದಿದೆ. ತಕ್ಷಣವೇ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಹೊರತೆಗೆದಿದ್ದಾರೆ.
ಸದ್ಯ, ಬಾಲಕನ ಮೃತದೇಹವನ್ನು ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅಂತಿಮ ಸಂಸ್ಕಾರಕ್ಕಾಗಿ ಕೊಳ್ಳೇಗಾಲಕ್ಕೆ ರವಾನಿಸಲಾಗಿದೆ. ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಮೃತ ಬಾಲಕನ ತಂದೆ ರಜನಿಕಾಂತ್ ಮಾತನಾಡಿ, ಚೇಂಬರ್ ಮುಚ್ಚಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯವೇ ನನ್ನ ಮಗನ ಸಾವಿಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.