×
Ad

Bengaluru | ಪಾರ್ಕಿಂಗ್ ವಿಚಾರಕ್ಕೆ ಗಲಾಟೆ: ಓರ್ವನ ಹತ್ಯೆ

Update: 2026-02-02 20:13 IST

ಬೆಂಗಳೂರು : ಆಟೋ ಪಾರ್ಕಿಂಗ್ ವಿಚಾರವಾಗಿ ಸ್ನೇಹಿತರ ನಡುವೆ ಆರಂಭವಾಗಿದ್ದ ಗಲಾಟೆ ಹತ್ಯೆಯಲ್ಲಿ ಅಂತ್ಯವಾದ ಘಟನೆ ಫೆ.1ರ ತಡರಾತ್ರಿ ಇಲ್ಲಿನ ನಾಯಂಡಹಳ್ಳಿ ಸಮೀಪದ ಅಂಬೇಡ್ಕರ್ ಕಾಲೋನಿಯಲ್ಲಿ ವರದಿಯಾಗಿದೆ.

ಚಾಕುವಿನಿಂದ ಇರಿದು ಗುಣ(28) ಎಂಬಾತನನ್ನು ಹತ್ಯೆ ಮಾಡಲಾಗಿದ್ದು, ಆತನ ಸ್ನೇಹಿತ ವೇಲು ಎಂಬಾತ ಗಾಯಗೊಂಡಿದ್ದಾನೆ. ಈ ಪ್ರಕರಣ ಸಂಬಂಧ ವಿನೋದ್, ಅಜಿತ್, ಕುಮಾರ್ ಮತ್ತು ದೀನ ಎಂಬುವರನ್ನು ಬಂಧಿಸಿರುವುದಾಗಿ ಬ್ಯಾಟರಾಯನಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಒಂದೇ ಏರಿಯಾ ನಿವಾಸಿಗಳಾಗಿದ್ದ ಗುಣ ಹಾಗೂ ವಿನೋದ್ ನಡುವೆ ಆಟೋ ನಿಲ್ಲಿಸುವ ವಿಚಾರಕ್ಕೆ ಎರಡು ದಿನಗಳ ಹಿಂದಷ್ಟೇ ಗಲಾಟೆಯಾಗಿತ್ತು. ಆ ಸಂದರ್ಭದಲ್ಲಿ ವಿನೋದ್, ಅಜಿತ್ ಹಾಗೂ ಕುಮಾರ್ ಸೇರಿ ಗುಣನ ಆಟೋ ಜಖಂಗೊಳಿಸಿದ್ದರು. ಈ ಪ್ರಕರಣ ಬ್ಯಾಟರಾಯನಪುರ ಠಾಣೆ ಮೆಟ್ಟಿಲೇರಿದ ಬಳಿಕ ಎರಡೂ ಕಡೆಯವರಿಗೆ ಪೊಲೀಸರು ಬುದ್ಧಿವಾದ ಹೇಳಿ ಎಚ್ಚರಿಕೆ ನೀಡಿದ್ದರು.

ಅದೇ ವಿಚಾರವಾಗಿ ಫೆ.1ರ ತಡರಾತ್ರಿ ಪೊಲೀಸ್ ಠಾಣೆಗೆ ತೆರಳಿ ವಾಪಸ್ ಬಂದ ಗುಣ ಎಂಬುವನಿಗೆ ಆರೋಪಿ ವಿನೋದ್, ಮತ್ತವನ ಕಡೆಯವರು ಸೇರಿಕೊಂಡು ಚಾಕು ಇರಿದಿದ್ದು, ಆತನ ಸ್ನೇಹಿತ ವೇಲು ಎಂಬಾತನಿಗೂ ಗಾಯಗಳಾಗಿದ್ದವು. ತಕ್ಷಣ ಗುಣನನ್ನು ಆಸ್ಪತ್ರೆಗೆ ಸಾಗಿಸಲಾಗಿದೆಯಾದರೂ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಈ ಮೂವರು ಹತ್ಯೆ ಪ್ರಕರಣವೊಂದರ ಆರೋಪಿಗಳಾಗಿದ್ದವರು. ಅವರವರ ನಡುವೆಯೇ ಆರಂಭವಾದ ಗಲಾಟೆ ಹತ್ಯೆ ಮಾಡುವ ಹಂತಕ್ಕೆ ತಲುಪಿದೆ. ಸದ್ಯ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News