×
Ad

ಕೇಂದ್ರ-ರಾಜ್ಯ ಸರಕಾರಗಳು ಒಟ್ಟಾಗಿ ಕೆಲಸ ಮಾಡಬೇಕು : ಆರ್.ಅಶೋಕ್

Update: 2026-02-02 20:35 IST

ಬೆಂಗಳೂರು : ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಅಭಿವೃದ್ಧಿ ಸಾಧ್ಯ.ಆದರೆ, ಕರ್ನಾಟಕದ ಕಾಂಗ್ರೆಸ್ ಸರಕಾರ ಕೇಂದ್ರದ ವಿರುದ್ದ ಪದೇ ಪದೇ ಕಾಲು ಕೆರೆದು ಜಗಳವಾಡುತ್ತಿದೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.

ಸೋಮವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತು ಚರ್ಚೆಯಲ್ಲಿ ಭಾಗವಹಿಸಿದ್ದ ಅವರು, ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರು ಕೇಂದ್ರದೊಂದಿಗೆ ಸೌಹಾರ್ದಯುತ ಸಂಬಂಧ ಬೆಳೆಸಿದ್ದರಿಂದಾಗಿ ಬೆಂಗಳೂರಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮೆಟ್ರೊ ರೈಲು ಅನುಷ್ಠಾನಕ್ಕೆ ಬಂದವು. ಆದರೆ, ಕಾಲು ಕೆರೆದು ಜಗಳವಾಡುವುದರಿಂದ ಏನೂ ಪ್ರಯೋಜನವಾಗುವುದಿಲ್ಲ ಎಂದು ಉಲ್ಲೇಖಿಸಿದರು.

ರಾಜ್ಯಪಾಲರ ಭಾಷಣದಲ್ಲಿ 12 ಪುಟಗಳಷ್ಟು ವಿಬಿ-ಜಿ ರಾಮ್‍ಜಿ ಯೋಜನೆಯನ್ನು ಟೀಕಿಸಲು ಬಳಕೆ ಮಾಡಿದ್ದಾರೆ ಎಂದು ಟೀಕಿಸಿದರು. ಆಗ ಸಚಿವ ರಾಮಲಿಂಗಾರೆಡ್ಡಿ ಮಧ್ಯಪ್ರವೇಶಿಸಿ, ವಿಬಿ ಜಿ ರಾಮ್‍ಜಿ ಯಲ್ಲಿರುವುದು ಶ್ರೀರಾಮನ ಹೆಸರಲ್ಲ ಎಂದು ಉಲ್ಲೇಖಿಸಿದರು.ಇದಕ್ಕೆ ಸಚಿವ ಭೈರತಿ ಸುರೇಶ್ ದನಿಗೂಡಿಸಿ ಬಿಜೆಪಿಯವರು ಎಲ್ಲದಕ್ಕೂ ದೇವರನ್ನೆ ಎಳೆದು ತರುವುದು ಏಕೆ ಎಂದು ಪ್ರಶ್ನಿಸಿದರು.

ಆಗ ಬಿಜೆಪಿ ಸದಸ್ಯ ಸುರೇಶ್‍ಕುಮಾರ್, ರಾಜ್ಯಪಾಲರ ಭಾಷಣದಲ್ಲಿ ವಿಬಿ-ಜಿ ರಾಮ್ ಜಿ ಅನ್ನು ಕಾಂಗ್ರೆಸ್ ಸರಕಾರ ವಿಬಿ ಗ್ರಾಮ್ ಜೀ ಎಂದು ಬದಲಾವಣೆ ಮಾಡಿದೆ. ರಾಮನ ಕಂಡರೆ ಇವರಿಗೆ ಸಹನೆ ಇಲ್ಲ ಎಂದರು. ರಾಮಲಿಂಗಾರೆಡ್ಡಿ ಅವರ ಹೆಸರಿನಲ್ಲಿಯೇ ರಾಮ ಇದ್ದಾನೆ ಎಂದು ಭೈರತಿ ಸುರೇಶ್ ಹೇಳಿದಾಗ, ಅಶೋಕ್ ಅವರು ಇವರೇ ಆಗಿದ್ದರೆ ರಾಮನ ಹೆಸರು ಇಟ್ಟುಕೊಳ್ಳುತ್ತಿರಲಿಲ್ಲ. ಅವರ ತಂದೆ ನಾಮಕರಣ ಮಾಡಿದ್ದಕ್ಕೆ ಆ ಹೆಸರು ಉಳಿದಿದೆ ಎಂದು ಅಶೋಕ್ ಲೇವಡಿ ಮಾಡಿದರು.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News