ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅನುಮತಿ; ಸರಕಾರದ ಆದೇಶಕ್ಕೆ ವಿವಿಧ ಸಂಘಟನೆಗಳಿಂದ ಸ್ವಾಗತ
ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು, ಮೇ 14: ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅನುಮತಿ ನೀಡಿ ರಾಜ್ಯ ಸರಕಾರ ಹೊರಡಿಸಿರುವ ನೂತನ ಆದೇಶವನ್ನು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಘಟಕ, ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ್(ಜಿಐಒ) ಹಾಗೂ ಜನವಾದಿ ಮಹಿಳಾ ಸಂಘಟನೆ ಸ್ವಾಗತಿಸಿದೆ.
ಜಮಾಅತೆ ಇಸ್ಲಾಮಿ ಹಿಂದ್: ಸರಕಾರದ ಈ ನಿರ್ಧಾರವು ಮುಸ್ಲಿಮ್ ವಿದ್ಯಾರ್ಥಿನಿಯರ ಶಿಕ್ಷಣದ ಹಕ್ಕು ಮತ್ತು ಸಾಂವಿಧಾನಿಕ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವಲ್ಲಿ ಪ್ರಮುಖ ಮೈಲಿಗಲ್ಲಾಗಲಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಘಟಕದ ಅಧ್ಯಕ್ಷ ಡಾ.ಮುಹಮ್ಮದ್ ಸಾದ್ ಬೆಳಗಾಮಿ ತಿಳಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಹಿಜಾಬ್ ವಿವಾದದಿಂದಾಗಿ ಸಾವಿರಾರು ಪ್ರತಿಭಾವಂತ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು ಅಥವಾ ಆತಂಕದ ನೆರಳಿನಲ್ಲಿ ಕಲಿಯುವಂತಾಗಿತ್ತು.
ಸರಕಾರವು 2022ರ ಫೆ.5ರಂದು ಹೊರಡಿಸಿದ್ದ ವಿವಾದಾತ್ಮಕ ಆದೇಶವನ್ನು ಹಿಂಪಡೆದು, ಸಾಂಪ್ರದಾಯಿಕ ಶಿರವಸ್ತ್ರ (ಹಿಜಾಬ್) ಧರಿಸಲು ಮುಕ್ತ ಅವಕಾಶ ನೀಡಿರುವುದು ಸಾಮಾಜಿಕ ನ್ಯಾಯಕ್ಕಾಗಿ ನಡೆದ ನಿರಂತರ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಅವರು ಹೇಳಿದ್ದಾರೆ.
ಪೇಟ, ಜನಿವಾರ, ರುದ್ರಾಕ್ಷಿಯಂತೆಯೇ ಹಿಜಾಬ್‍ಗೂ ಸಮಾನ ಸ್ಥಾನಮಾನ ನೀಡಿರುವುದು ಬಹುತ್ವದ ಭಾರತದ ಸಂಕೇತವಾಗಿದೆ. ಶಿಕ್ಷಣ ಸಂಸ್ಥೆಗಳು ಯಾವುದೇ ತಾರತಮ್ಯವಿಲ್ಲದೆ ಈ ಆದೇಶವನ್ನು ತಕ್ಷಣವೇ ಜಾರಿಗೆ ತರಬೇಕು. ವಿದ್ಯಾರ್ಥಿನಿಯರು ಯಾವುದೇ ಮುಜುಗರವಿಲ್ಲದೆ ತರಗತಿಗಳಿಗೆ ಹಾಜರಾಗಲು ಪೂರಕವಾದ ಸೌಹಾರ್ದಯುತ ವಾತಾವರಣವನ್ನು ನಿರ್ಮಿಸಿಕೊಡಬೇಕು ಎಂದು ಮುಹಮ್ಮದ್ ಸಾದ್ ಬೆಳಗಾಮಿ ಆಗ್ರಹಿಸಿದ್ದಾರೆ.
ಜಿಐಒ: ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಹಿಜಾಬ್ ಕೇವಲ ಸಾಂಸ್ಕೃತಿಕ ಆಚರಣೆಯಲ್ಲ, ಬದಲಾಗಿ ಅವರ ಧಾರ್ಮಿಕ ನಂಬಿಕೆ, ಗುರುತು ಮತ್ತು ವೈಯಕ್ತಿಕ ಆಯ್ಕೆಯ ಭಾಗವಾಗಿದೆ. ಹಿಂದಿನ ನಿರ್ಬಂಧವು ಮುಸ್ಲಿಮ್ ವಿದ್ಯಾರ್ಥಿನಿಯರಲ್ಲಿ ಭಾವನಾತ್ಮಕ ಸಂಕಟ ಮತ್ತು ಅನಿಶ್ಚಿತತೆಯನ್ನು ಉಂಟು ಮಾಡಿತ್ತು. ಹಲವಾರು ಹೆಣ್ಣುಮಕ್ಕಳು ತಮ್ಮ ಶಿಕ್ಷಣ ಮತ್ತು ತಮ್ಮ ನಂಬಿಕೆಯ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಒತ್ತಾಯಕ್ಕೆ ಒಳಗಾಗಿ ಮಾನಸಿಕ ಒತ್ತಡವನ್ನು ಅನುಭವಿಸಿದ್ದರು ಎಂದು ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ್(ಜಿಐಒ) ರಾಜ್ಯಾಧ್ಯಕ್ಷೆ ನವೀದಾ ಹುಸೈನ್ ಅಸದಿ ತಿಳಿಸಿದ್ದಾರೆ.
ಮುಸ್ಲಿಮ್ ವಿದ್ಯಾರ್ಥಿನಿಯರ ಘನತೆ ಮತ್ತು ಶೈಕ್ಷಣಿಕ ಹಕ್ಕುಗಳನ್ನು ವೈಯಕ್ತಿಕ ಅಥವಾ ರಾಜಕೀಯ ಹಿತಾಸಕ್ತಿಗಾಗಿ ರಾಜಕೀಯಗೊಳಿಸದಂತೆ ರಾಜಕೀಯ ಮುಖಂಡರು ಮತ್ತು ಸಾಮಾಜಿಕ ಕಾರ್ಯಕರ್ತರಲ್ಲಿ ಮನವಿ ಮಾಡಿರುವ ಅವರು, ಶೈಕ್ಷಣಿಕ ಸಂಸ್ಥೆಗಳು ಎಲ್ಲ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ, ಗೌರವ ಮತ್ತು ಒಳಗೊಳ್ಳುವಿಕೆಯ ಸ್ಥಳಗಳಾಗಿ ಉಳಿಯಬೇಕು ಎಂದು ತಿಳಿಸಿದ್ದಾರೆ.
ಜನವಾದಿ ಮಹಿಳಾ ಸಂಘಟನೆ: ಸಮವಸ್ತ್ರ ನೀತಿಗೆ ಧಕ್ಕೆಯಾಗದಂತೆ ಸೀಮಿತ ಹಾಗೂ ಪದ್ಧತಿ ಆಧಾರಿತ ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ಧರಿಸಲು ಅವಕಾಶ ಕಲ್ಪಿಸಿ ರಾಜ್ಯ ಸರಕಾರ ಹೊರಡಿಸಿರುವ ಆದೇಶವನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಚಂದ್ರಕುಮಾರಿ ಹಾಗೂ ಪ್ರಧಾನ ಕಾರ್ಯದರ್ಶಿ ದೇವಿ ಸ್ವಾಗತಿಸಿದ್ದಾರೆ.
ಶಾಲಾ ಕಾಲೇಜಿನ ಸಮವಸ್ತ್ರದ ಹೆಸರಿನಲ್ಲಿಯೂ ರಾಜಕಾರಣ ಮಾಡುತ್ತ ಅದನ್ನೂ ಕೋಮುವಾದಿಕರಿಸಲು ಹೊರಟಿರುವುದು ಖಂಡನೀಯ. ತಡವಾಗಿಯಾದರೂ ರಾಜ್ಯ ಸರಕಾರವು ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕನ್ನು ಎತ್ತಿ ಹಿಡಿಯಲು ಇಂತಹ ನಿಲುವು ತೆಗೆದುಕೊಂಡಿರುವುದು ಸ್ವಾಗತಾರ್ಹ. ಅದೇ ರೀತಿ ಅನಗತ್ಯ ಗಲಭೆ ಸೃಷ್ಟಿಸಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜನವಾದಿ ಮಹಿಳಾ ಸಂಘಟನೆಯ ಪ್ರಮುಖರು ಆಗ್ರಹಿಸಿದ್ದಾರೆ.