×
Ad

ವೀರೇಂದ್ರ ಹೆಗ್ಗಡೆ, ಕುಟುಂಬದ ಕುರಿತ ಎಐ ಫೋಟೊ, ವೀಡಿಯೊ ಕಂಟೆಂಟ್ ತೆರವಿಗೆ ಕ್ರಮ ಕೈಗೊಳ್ಳಿ : ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ

Update: 2026-05-15 00:24 IST

ಸಾಂದರ್ಭಿಕ ಚಿತ್ರ | PC : judiciary.karnataka.gov.in

ಬೆಂಗಳೂರು, ಮೇ 14: ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮತ್ತವರ ಕುಟುಂಬದವರ ವಿರುದ್ಧ ಕೃತಕ ಬುದ್ಧಿಮತ್ತೆ (ಎಐ) ಬಳಕೆ ಮಾಡಿ ಸಿದ್ಧಪಡಿಸಲಾಗಿದೆ ಎನ್ನಲಾದ ಮಾನಹಾನಿ ಉಂಟು ಮಾಡುವ ಫೋಟೊ, ವೀಡಿಯೊ ಮತ್ತು ಕಂಟೆಂಟ್‌ಅನ್ನು ಸಾಮಾಜಿಕ ಜಾಲತಾಣಗಳಿಂದ ಒಂದು ವಾರದಲ್ಲಿ ತೆಗೆಯಲು ಕ್ರಮಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ನಿರ್ದೇಶಕ ಶೀನಪ್ಪ, ನಂದೀಶ್ ಕುಮಾರ್ ಜೈನ್, ವೀರೇಂದ್ರ ಹೆಗ್ಗಡೆ ಸಹೋದರ ಪುತ್ರ ಡಿ. ನಿಶ್ಚಲ್ ಹಾಗೂ ಪಿ. ಸುನೀಲ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ಇತ್ಯರ್ಥಪಡಿಸಿರುವ ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ಅವರಿದ್ದ ರಜಾಕಾಲದ ನ್ಯಾಯಪೀಠ ಈ ಆದೇಶ ಮಾಡಿದೆ. ಎಲ್ಲ ಆಕ್ಷೇಪಾರ್ಹ ಫೋಟೊ, ವೀಡಿಯೊ ಹಾಗೂ ಕಂಟೆಂಟ್‌ಗಳನ್ನು ಕಾನೂನಿನ ಅನ್ವಯ ತೆರವುಗೊಳಿಸಲಿ ರಾಜ್ಯ ಸರಕಾರ ಹಾಗೂ ಕೇಂದ್ರೀಯ ವಿಭಾಗದ ಸಿಇಎನ್ ಪೊಲೀಸರು ತೆರವುಗೊಳಿಸಲು ಸಾಮಾಜಿಕ ಮಾಧ್ಯಮಗಳಾದ ಗೂಗಲ್, ಮೆಟಾ, ವಾಟ್ಸ್‌ಆ್ಯಪ್ ಹಾಗೂ ಇನ್‌ಸ್ಟಾಗ್ರಾಂಗೆ ನಿರ್ದೇಶಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಎಸ್.ರಾಜಶೇಖರ್, ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಕೇವಲ ಮಧ್ಯಸ್ಥಿಕೆ ಸಂಸ್ಥೆಗಳಾಗಿದ್ದು, ಇಂಥ ಕಂಟೆಂಟ್ ಹಂಚಿಕೆ ಮಾಡದಂತೆ ನಿರ್ಬಂಧಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹಾಗೂ ಸಿಇಎನ್ ಪೊಲೀಸರು ಕಾರ್ಯಪ್ರವೃತ್ತರಾಗಬೇಕು. ವೀರೇಂದ್ರ ಹೆಗ್ಗಡೆ ಕುಟುಂಬದವರು ಯಾವುದೇ ಕ್ರಿಮಿನಲ್ ಪ್ರಕ್ರಿಯೆಯಲ್ಲಿ ಭಾಗಿಯಾಗಿಲ್ಲ. ಅದಾಗ್ಯೂ, ಅವರ ವಿರುದ್ಧ ಮಾನಹಾನಿ ಮತ್ತು ತಿರುಚಿದ ಕಂಟೆಂಟ್‌ಗಳನ್ನು ಆನ್‌ಲೈನ್ ಮೂಲಕ ನಿರಂತರವಾಗಿ ಹಂಚಿಕೆ ಮಾಡಲಾಗುತ್ತಿದೆ ಎಂದರು. ಪ್ರತಿದಿನ ಧರ್ಮಸ್ಥಳದ ಮಂಜುನಾಥೇಶ್ವರ ದೇವಾಲಯಕ್ಕೆ 30ರಿಂದ 40 ಸಾವಿರ ಮಂದಿ ಭೇಟಿ ನೀಡುತ್ತಿದ್ದು, ಹೆಗ್ಗಡೆ ಮತ್ತವರ ಕುಟುಂಬವು ತಮ್ಮದಲ್ಲದ ತಪ್ಪಿಗೆ ಮುಜುಗರ ಎದುರಿಸುವಂತಾಗಿದೆ. ಪ್ರತಿದಿನ ಸಾವಿರಾರು ಮಂದಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟವಾಗುವ ಕಂಟೆಂಟ್ ಅನ್ನು ಏಕೆ ತೆಗೆದಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ ಎಂದು ವಿವರಿಸಿದರು.

ಸರಕಾರದ ಪರ ವಕೀಲರು ಸೂಕ್ತ ಕಾಲಾವಕಾಶ ನೀಡಿದರೆ ಸಕ್ಷಮ ಪ್ರಾಧಿಕಾರ ಆ ನಿಟ್ಟಿನಲ್ಲಿ ಕೆಲಸ ಮಾಡಲಿದೆ ಎಂದರು. ಗೂಗಲ್ ಪರ ವಕೀಲರು ಬಹುತೇಕ ಕಂಟೆಂಟ್ 2025ರಲ್ಲಿ ಪ್ರಕಟವಾಗಿದ್ದು, ಬಹುತೇಕ ಯುಆರ್‌ಎಲ್‌ಗಳು ಫೇಸ್‌ಬುಕ್‌ಗೆ ಸಂಬಂಧಿಸಿದ್ದಾಗಿವೆ ಎಂದರು.

ಮನವಿ ಏನು?: ಎಐ ಬಳಕೆ ಮಾಡಿ ಸೃಷ್ಟಿಸಲಾಗುವ ತಿರುಚಿದ ಚಿತ್ರ, ವೀಡಿಯೊದಲ್ಲಿ ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದವರನ್ನು ತುಚ್ಛವಾಗಿ ಚಿತ್ರಿಸಿ ಪ್ರಸಾರ, ಹಂಚಿಕೆ, ಪ್ರಕಟ ಮತ್ತು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡದಂತೆ ಕ್ರಮಕೈಗೊಳ್ಳಲು ರಾಜ್ಯ ಸರಕಾರ ಮತ್ತು ಬೆಂಗಳೂರಿನ ಕೇಂದ್ರ ವಿಭಾಗದ ಸಿಇಎನ್ ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಹಾಗೂ ಹೈಕೋರ್ಟ್ ಹಲವು ಪ್ರತಿಬಂಧಕಾದೇಶಗಳನ್ನು ಮಾಡಿರುವ ಹೊರತಾಗಿಯೂ ಹಿತಾಸಕ್ತಿ ಹೊಂದಿರುವ ಕೆಲ ವ್ಯಕ್ತಿಗಳು ನಿರಂತರವಾಗಿ ದುರುದ್ದೇಶದಿಂದ ಅಪಪ್ರಚಾರ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸೂಕ್ತ ಆದೇಶ ಮಾಡಬೇಕು ಎಂದು ಮನವಿ ಮಾಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News