ಯೋಗೀಶ ಗೌಡ ಕೊಲೆ ಪ್ರಕರಣ; ಚನ್ನಕೇಶವ ಟಿಂಗರೀಕರ ಮೇಲ್ಮನವಿ ವಿಚಾರಣೆ ಮೇ 26ಕ್ಕೆ ನಿಗದಿಪಡಿಸಿದ ಹೈಕೋರ್ಟ್
ಬೆಂಗಳೂರು: ಧಾರವಾಡದ ಬಿಜೆಪಿ ಮುಖಂಡ ಯೋಗೀಶ ಗೌಡ ಗೌಡ ಕೊಲೆ ಪ್ರಕರಣದ ಸಾಕ್ಷ್ಯನಾಶಪಡಿಸಿದ ಆರೋಪದಲ್ಲಿ ವಿಚಾರಣಾ ನ್ಯಾಯಾಲಯ ವಿಧಿಸಿರುವ 7 ವರ್ಷ ಜೈಲು ಶಿಕ್ಷೆಯನ್ನು ಪ್ರಶ್ನಿಸಿ ಪೊಲೀಸ್ ಅಧಿಕಾರಿ ಚನ್ನಕೇಶವ ಬಿ. ಟಿಂಗರೀಕರ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಹೈಕೋರ್ಟ್ ಮೇ 26ಕ್ಕೆ ನಿಗದಿಪಡಿಸಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿರುವ ಶಿಕ್ಷೆಯನ್ನು ಅಮಾನತಿನಲ್ಲಿರಿಸಿ, ಜಾಮೀನು ಮಂಜೂರು ಮಾಡುವಂತೆ ಕೋರಿ ಪ್ರಕರಣದ 19ನೇ ಆರೋಪಿ ಚನ್ನಕೇಶವ ಟಿಂಗರೀಕರ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಹಾಗೂ ನ್ಯಾಯಮೂರ್ತಿ ಪಿ. ಶ್ರೀ ಸುಧಾ ಅವರಿದ್ದ ರಜಾಕಾಲದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಕೊಲೆ ಪ್ರಕರಣದ ತನಿಖಾಧಿಕಾರಿಯಾಗಿದ್ದ ಮೇಲ್ಮನವಿದಾರರು ನಡೆಸಿರುವ ತನಿಖೆಯಲ್ಲಿ ಗಂಭೀರ ಲೋಪವೆಸಗಿರುವುದಾಗಿ ತಿಳಿದುಬಂದಿದ್ದು, ಅವರ ವಿರುದ್ಧದ ಶಿಕ್ಷೆ ಅಮಾನತಿನಲ್ಲಿಡಬೇಕಾದರೆ ವಿಸ್ತೃತವಾಗಿ ವಿಚಾರಣೆ ನಡೆಸಿ ನಿರ್ಧರಿಸಬೇಕಾಗುತ್ತದೆ. ಆದ್ದರಿಂದ, ಮೇಲ್ಮನವಿ ವಿಚಾರಣೆ ಮುಂದೂಡುತ್ತಿರುವುದಾಗಿ ತಿಳಿಸಿ, ಮೇ 26ಕ್ಕೆ ವಿಚಾರಣೆ ನಿಗದಿಪಡಿಸಿತು.
ಇದಕ್ಕೂ ಮುನ್ನ ಟಿಂಗರೀಕರ ಪರ ವಕೀಲರು ವಾದ ಮಂಡಿಸಿ, ಮೇಲ್ಮನವಿದಾರರು ಪೊಲೀಸ್ ಅಧಿಕಾರಿಯಾಗಿದ್ದು, ಸರಿಯಾಗಿ ತನಿಖೆ ನಡೆಸಿಲ್ಲ ಎಂಬ ಆರೋಪವಿದೆ. ಆದರೆ, ಅವರ ವಿರುದ್ಧದ ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಟಿಂಗರೀಕರ ಅವರು ಕೇವಲ 90 ದಿನಗಳವರೆಗೆ ತನಿಖಾಧಿಕಾರಿಯಾಗಿದ್ದರು. ಸಿಸಿ ಕ್ಯಾಮರಾ ದಾಖಲೆಗಳು ಹಾಗೂ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ತನಿಖೆ ನಡೆಸಿದ್ದರು. ಅವರ ವಿರುದ್ಧ ಕೇವಲ ಮೌಖಿಕ ಸಾಕ್ಷ್ಯಗಳು ಮಾತ್ರ ಇವೆ. ಆದ್ದರಿಂದ, ವಿಚಾರಣಾ ನ್ಯಾಯಾಲಯ ವಿಧಿಸಿರುವ ಶಿಕ್ಷೆಯನ್ನು ಅಮಾನತಿನಲ್ಲಿಡಬೇಕು ಎಂದು ಕೋರಿದರು.
ಇದಕ್ಕೆ ಆಕ್ಷೇಪಿಸಿದ ಸಿಬಿಐ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರು, ಮೇಲ್ಮನವಿದಾರರಿಗೆ 7 ವರ್ಷ ಶಿಕ್ಷೆ ವಿಧಿಸಲಾಗಿದೆ. ರಾಜ್ಯದ ಪೊಲೀಸರು ನ್ಯಾಯದಾನ ಮಾಡುವ ಕೆಲಸ ಮಾಡಬೇಕು. ಆದರೆ, ಆರೋಪಿಗಳ ಜತೆ ಕೈಜೋಡಿಸಿರುವ ಮೇಲ್ಮನವಿದಾರ ಅಧಿಕಾರಿ, ನೈಜ ಸಾಕ್ಷ್ಯಗಳನ್ನು ಮರೆಮಾಚಿ ಬದಲಿ ಸಾಕ್ಷ್ಯಗಳನ್ನು ಸಂಗ್ರಹಿಸಿ ಅಪರಾಧವೆಸಗಿದ್ದಾರೆ. ಆದ್ದರಿಂದ, ಅವರಿಗೆ ವಿಚಾರಣಾ ನ್ಯಾಯಾಲಯ ವಿಧಿಸಿರುವ ಶಿಕ್ಷೆ ಸೂಕ್ತವಾಗಿದ್ದು, ಯಾವುದೇ ರೀತಿಯ ಪರಿಹಾರ ನೀಡಬಾರದು ನ್ಯಾಯಾಲಯಕ್ಕೆ ಮನವಿ ಮಾಡಿದರು.