ಬೆಂಗಳೂರು : ಈ ದೇಶದಲ್ಲಿ ಕಾಪಾಡುವ ಕೈಗಳು ಶಿಕ್ಷೆಗೆ ಒಳಗಾಗಬೇಕಾದ ಭಯಾನಕ ಪರಿಸ್ಥಿತಿಯನ್ನು ಎದುರಿಸಬೇಕಾದ ವಾತಾವರಣ ಸೃಷ್ಟಿಯಾಗುತ್ತಿದ್ದು, ಧರ್ಮ ಮತ್ತು ಜಾತಿ ಈ ದೇಶವನ್ನು ನುಂಗಿಹಾಕುತ್ತಿದೆ ಎಂದು ಲೇಖಕ ಡಾ.ಕಫೀಲ್ ಖಾನ್ ಕಳವಳ ವ್ಯಕ್ತಪಡಿಸಿದ್ದಾರೆ.

ಸೋಮವಾರ ನಗರದಲ್ಲಿರುವ ನವಕರ್ನಾಟಕ ಪಬ್ಲಿಕೇಷನ್‌ನ ಹೊಸತು ಅಂಗಳದಲ್ಲಿ ಬಹುರೂಪಿ ಪ್ರಕಾಶನವು ಹಮ್ಮಿಕೊಂಡಿದ್ದ ತಮ್ಮ ಕೃತಿಯಾದ ‘ಗೋರಖಪುರ ಆಸ್ಪತ್ರೆ ದುರಂತ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇವತ್ತಿನ ವ್ಯವಸ್ಥೆಗೆ ಮಾಧ್ಯಮಗಳೂ ಕೈಜೋಡಿಸಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರವಾಗಿಸಿದೆ. ಮಕ್ಕಳನ್ನು ಬದುಕಿಸಿದ ಧೀರ ಎನ್ನುವ ಪ್ರಶಂಸೆ ಮಾಡಿದ ಮಾಧ್ಯಮಗಳೇ ಮಕ್ಕಳನ್ನು ಕೊಂದ ಖಳನಾಯಕ ಎನ್ನುವ ಹಣೆಪಟ್ಟಿ ಅಂಟಿಸಿದವು. ನನ್ನ ಮುಂದೆ ಇದ್ದದ್ದು ಮಕ್ಕಳನ್ನು ಉಳಿಸುವ ಗುರಿಯಷ್ಟೇ. ಆದರೆ ನಾನು 308 ಮಕ್ಕಳನ್ನು ಕೊಂದೆ ಎನ್ನುವ ಆರೋಪ ಹೊರಿಸಿ 9 ತಿಂಗಳುಗಳ ಕಾಲ ಜೈಲಿಗೆ ತಳ್ಳಿದವು ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕೃತಿಯ ಅನುವಾದಕ, ಪತ್ರಕರ್ತ ಬಿ.ಎಂ.ಹನೀಫ್ ಮಾತನಾಡಿ, ಡಾ.ಕಫೀಲ್ ಖಾನ್ ಅವರ ‘ಗೋರಖಪುರ ಆಸ್ಪತ್ರೆ ದುರಂತ’ ಕೃತಿ ಮನಸ್ಸನ್ನು ಕಲಕುತ್ತದೆ. ಕಫೀಲ್ ಖಾನ್ ಅವರು ವ್ಯವಸ್ಥೆಯ ಕರಾಳತೆಯ ವಿರುದ್ಧ ನಡೆಸಿದ ಹೋರಾಟ ಎಲ್ಲರಿಗೂ ಸ್ಫೂರ್ತಿದಾಯಕ ಎಂದು ನುಡಿದರು.

ಬಹುರೂಪಿಯ ಜಿ.ಎನ್.ಮೋಹನ್ ಮಾತನಾಡಿ, ಕಫೀಲ್ ಖಾನ್ ಪ್ರಕರಣ ಇಡೀ ವ್ಯವಸ್ಥೆಗೆ ಕನ್ನಡಿ ಹಿಡಿದಿದೆ. ಇವತ್ತಿನ ಜೆನ್ ಜೀ ಹೋರಾಟಕ್ಕೆ ಕಫೀಲ್ ಖಾನ್ ಅವರ ದೃಢ ಹೋರಾಟವೂ ಸಾಕಷ್ಟು ಶಕ್ತಿ ನೀಡಿದೆ ಎಂದರು.

ಈ ಸಂದರ್ಭದಲ್ಲಿ ಹಿರಿಯ ಲೇಖಕಿ, ಸಾಮಾಜಿಕ ಚಿಂತಕಿ ಡಾ.ವಿಜಯಾ ಹಾಗೂ ಬಹುರೂಪಿ ಸಂಸ್ಥಾಪಕಿ ಶ್ರೀಜಾ ವಿ.ಎನ್. ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor