ಬರ: ಜನರ ಸಂಕಷ್ಟಕ್ಕೆ ಸರಕಾರದ ಸ್ಪಂದನ; ಮೋಜಣಿ ಶುಲ್ಕ ಹೆಚ್ಚಳಕ್ಕೆ ತಡೆ
ಸಾಂದರ್ಭಿಕ ಚಿತ್ರ | PC : Image by magnific
ಬೆಂಗಳೂರು : ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ರೈತರ ಹಿತಾಸಕ್ತಿಯನ್ನು ಪರಿಗಣಿಸಿ, ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಮೋಜಣಿ ವ್ಯವಸ್ಥೆಯಡಿ ಸಾರ್ವಜನಿಕರಿಂದ ಸ್ವೀಕರಿಸಲಾಗುವ ವಿವಿಧ ಅಳತೆ ಅರ್ಜಿಗಳ ಪರಿಷ್ಕೃತ ಶುಲ್ಕವನ್ನು ತಾತ್ಕಾಲಿಕವಾಗಿ ತಡೆಹಿಡಿಯಬೇಕು ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮೋಜಣಿ ವ್ಯವಸ್ಥೆಯಡಿ ಸ್ವೀಕರಿಸ ಲಾಗುವ ವಿವಿಧ ರೀತಿಯ ಅಳತೆ ಅರ್ಜಿಗಳ ಶುಲ್ಕ ಹಾಗೂ ಪರವಾನಿಗೆ ಪಡೆದ ಭೂಮಾಪಕರ ಸೇವಾ ಶುಲ್ಕವನ್ನು ಪರಿಷ್ಕರಿಸಿ, ಅ.1ರಿಂದ ಜಾರಿಗೆ ಬರುವಂತೆ ಆದೇಶಿಸಲಾಗಿತ್ತು. ಆದರೆ, ಪ್ರಸ್ತುತ ರಾಜ್ಯದ ವಿವಿಧ ಭಾಗಗಳಲ್ಲಿ ಬರ ಪರಿಸ್ಥಿತಿ ಇರುವುದರಿಂದ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಭೂಮಾಪನ ಮತ್ತು ಕಂದಾಯ ಸೇವೆಗಳ ಶುಲ್ಕ ಹೆಚ್ಚಳದಿಂದ ರೈತರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಬಾರದು ಎಂಬ ಉದ್ದೇಶದಿಂದ ಪರಿಷ್ಕೃತ ಶುಲ್ಕವನ್ನು ತಾತ್ಕಾಲಿಕವಾಗಿ ತಡೆಹಿಡಿಯುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮುಂದಿನ ಆದೇಶ ಹೊರಡಿಸುವವರೆಗೆ ಮೋಜಣಿ ಸೇವೆಗಳಿಗೆ ಸಂಬಂಧಿಸಿದಂತೆ ಅ.1ಕ್ಕೂ ಮೊದಲು ಚಾಲ್ತಿಯಲ್ಲಿದ್ದ ಶುಲ್ಕವೇ ಅನ್ವಯವಾಗಲಿದೆ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಸಂಕಷ್ಟದ ಸಂದರ್ಭದಲ್ಲಿ ರೈತರ ಹಿತಾಸಕ್ತಿಯೇ ಸರಕಾರದ ಆದ್ಯತೆ. ಈಗಾಗಲೇ ಹಲವು ರೀತಿಯ ಆರ್ಥಿಕ ಒತ್ತಡ ಎದುರಿಸುತ್ತಿರುವ ರೈತರ ಮೇಲೆ ಕಂದಾಯ ಇಲಾಖೆಯ ಸೇವೆಗಳ ಮೂಲಕ ಹೆಚ್ಚುವರಿ ಹೊರೆ ಬೀಳಬಾರದು. ಅದಕ್ಕಾಗಿ ಪರಿಷ್ಕೃತ ಶುಲ್ಕವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.