ಬೆಂಗಳೂರು | ಪಾನಮತ್ತರಾಗಿ ವಾಹನ ಚಾಲನೆ: 10 ದಿನಗಳಲ್ಲಿ 4,147 ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ | PC : freepik.
ಬೆಂಗಳೂರು : ರಾಜಧಾನಿ ಬೆಂಗಳೂರಿನಾದ್ಯಂತ ಸತತ 10 ದಿನಗಳ ವಿಶೇಷ ಕಾರ್ಯಾಚರಣೆ ಕೈಗೊಂಡ ನಗರ ಸಂಚಾರ ಪೊಲೀಸರು ಪಾನಮತ್ತರಾಗಿ ವಾಹನ ಚಾಲನೆ ಮಾಡುವವರ ವಿರುದ್ಧ 4,147 ಪ್ರಕರಣಗಳನ್ನು ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಡಿಸೆಂಬರ್ 22ರಿಂದ 31ರವರೆಗೆ ನಗರಾದ್ಯಂತ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗಿದ್ದು, 3.01 ಲಕ್ಷ ವಾಹನಗಳ ಚಾಲಕರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಆ ಪೈಕಿ ಪಾನಮತ್ತರಾಗಿದ್ದ 4,147 ಜನರ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.
ಪಾನಮತ್ತರಾಗಿ ವಾಹನ ಚಾಲನೆ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದುವರೆಯಲಿದ್ದು, ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸೂಚಿಸಿದ್ದಾರೆ.
ನಗರದಲ್ಲಿ ಕಿಡಿಗೇಡಿಗಳ ವ್ಹೀಲಿಂಗ್ ಮೇಲೆ ನಿರಂತರ ನಿಗಾ ಇರಿಸಲು ಹಾಗೂ ಅಪಘಾತಗಳನ್ನು ತಪ್ಪಿಸಲು ಈ ಕ್ರಮ ವಹಿಸಲಾಗುತ್ತಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.