ಬೆಂಗಳೂರು | ಕೆಎಸ್ಸಾರ್ಟಿಸಿ ಬಸ್-ಆಟೋ ನಡುವೆ ಅಪಘಾತ; ಮೂವರ ಸಾವು, ಮೂವರು ಗಂಭೀರ
ಸಾಂದರ್ಭಿಕ ಚಿತ್ರ
ಬೆಂಗಳೂರು : ಕೆಎಸ್ಸಾರ್ಟಿಸಿ ಬಸ್ ಮತ್ತು ಆಟೋ ನಡುವೆ ಅಪಘಾತ ಸಂಭವಿಸಿ ಆಟೋದಲ್ಲಿದ್ದ 6 ಜನರ ಪೈಕಿ ಮೂವರು ಸ್ಥಳದಲ್ಲೇ ಮೃತಪಟ್ಟರೆ, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ-75ರ ನೆಲಮಂಗಲದ ಮಲ್ಲರಬಾಣವಾಡಿ ಬಳಿ ಶನಿವಾರ ವರದಿಯಾಗಿದೆ.
ನೆಲಮಂಗಲ ತಾಲ್ಲೂಕಿನ ಶಾಂತಿನಗರ ನಿವಾಸಿ ಹಾಗೂ ಆಟೋ ಚಾಲಕ ಶ್ರೀನಿವಾಸ್(45), ಪುಟ್ಟಮ್ಮ(55), 13 ವರ್ಷದ ಬಾಲಕಿ ಮೃತಪಟ್ಟವರಾಗಿದ್ದು, ವೆಂಕಟೇಶ್(37), ನಾಗರತ್ನಮ್ಮ(38), 11 ವರ್ಷದ ಬಾಲಕಿ ಗಂಭೀರ ಗಾಯಗೊಂಡು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಆಟೋದಲ್ಲಿ ಪ್ರಯಾಣಿಸುತ್ತಿದ್ದವರು ಯಶವಂತಪುರ ನಿವಾಸಿಗಳು ಎಂದು ತಿಳಿದು ಬಂದಿದೆ. ಎರಡು ದಿನಗಳ ಹಿಂದೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಶನಿವಾರ ಶಾಂತಿನಗರದಿಂದ ನೆಲಮಂಗಲ ನಗರಕ್ಕೆ ಆಟೋದಲ್ಲಿ ಬರುವಾಗ ಮಲ್ಲರಬಾಣರವಾಡಿ ಕ್ರಾಸ್ ಬಳಿ ಬೆಂಗಳೂರಿನಿಂದ ಹೊರನಾಡಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಆಟೋಗೆ ಢಿಕ್ಕಿ ಹೊಡೆದಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬಳಿಕ ನೆಲಮಂಗಲ ಸಂಚಾರಿ ಪೊಲೀಸರು, ಟೋಲ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕೂಡಲೇ ಗಾಯಾಳುಗಳನ್ನು ನಗರದ ಸರಕಾರಿ ಆಸ್ಪತ್ರೆಗೆ ಕಳುಹಿಸಿ ಮೃತದೇಹಗಳನ್ನು ಶವಾಗಾರಕ್ಕೆ ರವಾನಿಸಿದ್ದಾರೆ. ಕ್ರೇನ್ ಮೂಲಕ ಆಟೋ ಮತ್ತು ಬಸ್ಸನ್ನು ತೆರವುಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಈ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.