ಕೆಪಿಸಿಎಲ್: 622 ಹುದ್ದೆಗೆ ಮರು ಪರೀಕ್ಷೆ
Update: 2025-12-26 23:23 IST
ಬೆಂಗಳೂರು : ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ವಿದ್ಯುತ್ ನಿಗಮದ(ಕೆಪಿಸಿಎಲ್) ಒಟ್ಟು 622 ಹುದ್ದೆಗಳ ನೇಮಕಾತಿಗೆ ಡಿ.27 ಮತ್ತು 28ರಂದು ಮರು ಪರೀಕ್ಷೆ ನಡೆಸುತ್ತಿದ್ದು, ಬಿಗಿ ಕ್ರಮಗಳನ್ನು ಕೈಗೊಂಡಿದೆ.
ಶುಕ್ರವಾರ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪ್ರಕಟನೆ ಹೊರಡಿಸಿದ್ದು, ಕೆಮಿಕಲ್ ಸೂಪರ್ ವೈಸರ್, ವಿವಿಧ ವಿಭಾಗಗಳ ಸಹಾಯಕ ಎಂಜಿನಿಯರ್‍ಗಳ ನೇಮಕಕ್ಕೆ ಡಿ.27ರಂದು ನಗರದ 17 ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಯಲಿದೆ. ಒಟ್ಟು 8,622 ಮಂದಿ ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದಾರೆ ಎಂದು ವಿವರಿಸಿದ್ದಾರೆ.
ಡಿ.28ರಂದು ಕೆಮಿಸ್ಟ್, ವಿವಿಧ ವಿಭಾಗಗಳ ಕಿರಿಯ ಎಂಜಿನಿಯರ್ ಹುದ್ದೆಗಳಿಗೆ ನಗರದ 21 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಒಟ್ಟು 10,136 ಮಂದಿ ಪರೀಕ್ಷೆ ಬರೆಯಲಿದ್ದಾರೆ. ಹಾಗೆಯೇ ಡಿ.28ರಂದು ಕನ್ನಡ ಭಾಷಾ ಪರೀಕ್ಷೆಯೂ ನಡೆಯಲಿದೆ ಎಂದು ಅವರು ಹೇಳಿದರು.