Bengaluru | ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಖಂಡಿಸಿ ಪ್ರತಿಭಟನೆ
ಬೆಂಗಳೂರು : ಲಿಂಗಾಯತ ಯುವತಿ ಮಾನ್ಯ ಹಾಗೂ ದಲಿತ ಯುವಕ ವಿವೇಕಾನಂದ ಮದುವೆಯಾಗಿರುವುದಕ್ಕೆ ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದೆಗೇಡು ಹತ್ಯೆಯನ್ನು ಖಂಡಿಸಿ, ಸಮಾನ ಮನಸ್ಕ-ಪ್ರಗತಿಪರ ಸಂಘಟನೆಗಳ ವತಿಯಿಂದ ನಗರದ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಹೋರಾಟಗಾರ್ತಿ ಕೆ.ಎಸ್.ವಿಮಲಾ, ನಮಗೆ ಇಷ್ಟಪಟ್ಟ ವ್ಯಕ್ತಿಯನ್ನು ಮದುವೆಯಾಗಿ ಬದುಕುವ ಸ್ವಾತಂತ್ರ್ಯ ಕೂಡ ಇಲ್ಲದಿರುವಂತಹ ಸ್ವತಂತ್ರ ಭಾರತದಲ್ಲಿ ನಾವು ಇದ್ದೇವೆ. ಡಾ.ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಯಾದ ಸಂವಿಧಾನ ಯಾವ ಜಾತಿ, ಲಿಂಗ, ಧರ್ಮ ಯಾವುದೇ ತಾರತಮ್ಯ ಇಲ್ಲದ ಸಮಾನವಾದ ಘನತೆಯ ಬದುಕುವ ಅಧಿಕಾರವನ್ನು ಖಚಿತಪಡಿಸಿದೆ. ಆದರೆ ಇವತ್ತು ಆಗುತ್ತಿರುವುದು ಏನು? ಎಂದು ಪ್ರಶ್ನಿಸಿದರು.
ಶ್ರೇಣೀಕೃತ ವ್ಯವಸ್ಥೆಯನ್ನು ಬೇಡ ಎಂದು ಹೇಳುತ್ತಿರುವ ಈ ಸಂದರ್ಭದಲ್ಲಿ, ಬ್ರಾಹ್ಮಣ್ಯವನ್ನು ಕಾಲಲ್ಲಿ ಒದ್ದು, ಅದರಿಂದ ಹೊರಗೆ ಬಸವಣ್ಣ ಮಾಡಿರುವ ಲಿಂಗಾಯತ ಧರ್ಮಿಯರು ಎಂದು ತಾವು ಹೇಳಿಕೊಂಡು ಬಸವಣ್ಣ ಅವರಿಗೆ ಅವಮಾನ ಮಾಡುವ ಕೆಲಸ ಮಾಡಲಾಗಿದೆ. ಯುವತಿ ಮಾನ್ಯ ಹಾಗೂ ಗರ್ಭದಲ್ಲಿರುವ ಮಗುವಿನ ಜೀವ ತೆಗೆದಿರುವುದು ಲಿಂಗಾಯತ ಧರ್ಮಕ್ಕೆ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಲಿತ ಸಂಘರ್ಷ ಸಮಿತಿಯ ಪ್ರದಾನ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ನೂರು ವರ್ಷ ತುಂಬಿರುವ ನೋಂದಣಿ ಇಲ್ಲದ ಸಂಸ್ಥೆ ದೇಶವನ್ನು ಗುತ್ತಿಗೆ ಹಿಡಿದಿದೆ. ಹಿಂದೂ ಧರ್ಮದಲ್ಲಿರುವ ಹೆಣ್ಣುಮಕ್ಕಳು ಅದರಲ್ಲಿನ ಕಟ್ಟುಪಾಡುಗಳಿಂದ ಹೊರ ಬರಬಾರದು ಎಂಬ ಮಾತನ್ನು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದರು. ಈ ರೀತಿಯ ಎಚ್ಚರಿಕೆಯನ್ನು ಅವರು ಆಗಾಗ ಕೊಡುತ್ತಿದ್ದಾರೆ. ಒಟ್ಟಾರೆ ಈ ದೇಶದಲ್ಲಿ ಹಿಂದೆ ಸೀತೆಯನ್ನು ಸುಟ್ಟು ಹಾಕಿದಂತೆ, ಬಹಿರಂಗವಾಗಿ ದ್ರೌಪದಿಯ ವಸ್ತ್ರಾಪಹರಣ ಮಾಡಿದಂತೆ ಇವತ್ತು ಬೇರೆ ಬೇರೆ ಸ್ವರೂಪಗಳಲ್ಲಿ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ಮಹಿಳಾ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ ಮಾತನಾಡಿ, ಜಾತಿ- ಧರ್ಮದ ಹೆಸರಿನಲ್ಲಿ ನಮ್ಮ ರಾಜ್ಯದಲ್ಲಿ ಮರ್ಯಾದೆಗೇಡು ಹತ್ಯೆ ನಡೆದಿರುವುದು ಖಂಡನೀಯ. ನಾವು ಯಾರೂ ಯಾವುದೇ ಧರ್ಮ, ಜಾತಿ, ಲಿಂಗದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕುವುದಿಲ್ಲ. ಈ ರೀತಿಯ ಮರ್ಯಾದೆಗೇಡು ಹತ್ಯೆ ಘಟನೆಗಳು ಮುಂದೆ ಆಗಬಾರದು. ಪರಿಹಾರ ನೀಡಿದರೆ ಜೀವ ಹಿಂದೆ ಬರುವುದಿಲ್ಲ ಎಂದು ಹೇಳಿದರು.
ಹೋರಾಟವನ್ನು ನಾವು ಮುಂದುವರಿಸೋಣ. ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡುತ್ತೇನೆ. ಮರ್ಯಾದೆಗೇಡು ಹತ್ಯೆಗಳನ್ನು ತಡೆಯಲು ರಾಜ್ಯದಲ್ಲಿ ಒಂದು ಕಾನೂನು ತರಬೇಕು. ಅದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸೋಣ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಹೋರಾಟಗಾರರಾದ ಬಸವರಾಜ ಕೌತಾಳ್, ಹುಲಿಕುಂಟೆ ಮೂರ್ತಿ, ಲೇಖಕಿ ದು.ಸರಸ್ವತಿ, ಆರ್.ಸುನಂದಮ್ಮ, ಉಮಾದೇವಿ, ವಕೀಲ ವಿನಯ್ ಶ್ರೀನಿವಾಸ್, ಮೈತ್ರೇಯಿ, ಕೆ.ವೈ.ನಾರಾಯಣಸ್ವಾಮಿ, ನಾಗವೇಣಿ ಮತ್ತಿತರರು ಹಾಜರಿದ್ದರು.
ಮರ್ಯಾದೆಗೇಡು ಹತ್ಯೆ ತಡೆಗೆ ಕಾಯ್ದೆ ರೂಪಿಸುವಂತೆ ಆಗ್ರಹ
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪ್ರತಿಭಟನಾಕಾರರು ಮೇಣದಬತ್ತಿ ಹಚ್ಚಿ ಮರ್ಯಾದೆಗೇಡು ಹತ್ಯೆಯನ್ನು ಖಂಡಿಸಿ, ರಾಜ್ಯ ಸರಕಾರ ಮರ್ಯಾದೆಗೇಡು ಹತ್ಯೆಗಳನ್ನು ತಡೆಯುವ ನಿಟ್ಟಿನಲ್ಲಿ ಸಮಗ್ರ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರಮುಖ ಹಕ್ಕೊತ್ತಾಯಗಳು :
ಮಾನ್ಯ ಹಾಗೂ ವಿವೇಕಾನಂದ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ವಿವೇಕಾನಂದ ಮತ್ತು ಅವರ ಕುಟುಂಬಕ್ಕೆ ಭದ್ರತೆ, ಘನತೆಯಿಂದ ಬದುಕುವ ಹಕ್ಕನ್ನು ಖಾತ್ರಿಪಡಿಸಲು ರಕ್ಷಣೆ ಒದಗಿಸಬೇಕು. ವಿವೇಕಾನಂದ ಅವರಿಗೆ ಸರಕಾರಿ ಉದ್ಯೋಗ ಒದಗಿಸಬೇಕು. ಸರಕಾರ ಪ್ರಾಮಾಣಿಕವಾದ ಮತ್ತು ನಿಷ್ಪಕ್ಷಪಾತ ತನಿಖೆಯನ್ನು ನಡೆಸಬೇಕು. ಹತ್ಯೆಯನ್ನು ಯೋಜಿಸಿದ, ಅದರಲ್ಲಿ ಭಾಗಿಯಾದ ಅಥವಾ ಅದಕ್ಕೆ ನೆರವಾದವರೂ ಸೇರಿದಂತೆ ಎಲ್ಲಾ ತಪ್ಪಿತಸ್ಥರಿಗೂ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕು. ಮರ್ಯಾದೆಗೇಡು ಹತ್ಯೆಗಳ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರಕಾರವು ಸಮಗ್ರ ಕಾಯಿದೆಯನ್ನು ರೂಪಿಸಲು, ಸಾರ್ವಜನಿಕ ಸಂವಾದಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಸರಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಾನಿರತರು ಹಕ್ಕೊತ್ತಾಯ ಮಂಡಿಸಿದರು.