ಏರೋ ಇಂಡಿಯಾ-2025 : ಬೆಂಗಳೂರು ಮೂಲದ ಕಾರ್ಗೋಮ್ಯಾಕ್ಸ್ ಡ್ರೋನ್ ಅನಾವರಣ
PC :x/@livefist
ಬೆಂಗಳೂರು : ಭಾರತೀಯ ಸಶಸ್ತ್ರ ಪಡೆಗಳಿಗೆ ಲಾಜಿಸ್ಟಿಕ್ಸ್ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಬೆಂಗಳೂರು ಮೂಲದ ಸ್ಕ್ಯಾಂಡ್ರಾನ್ ಸಂಸ್ಥೆಯು ಕಾರ್ಗೋಮ್ಯಾಕ್ಸ್ 20ಕೆಎಚ್‍ಸಿ ಡ್ರೋನ್ ಅನ್ನು ಅಭಿವೃದ್ಧಿಪಡಿಸಿದ್ದು, ಇಲ್ಲಿನ ಯಲಹಂಕ ವಾಯು ನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾದಲ್ಲಿ ಅನಾವರಣಗೊಳಿಸಿತು.
ಕಾರ್ಗೋಮ್ಯಾಕ್ಸ್ ಡ್ರೋನ್‍ಗಳು ಯುದ್ದದ ಸಮಯದಲ್ಲಿ ಸಹಕಾರಿಯಾಗುತ್ತದೆ. ಮರುಭೂಮಿ ಕಾರ್ಯಾಚರಣೆಗಳಿಗೆ ಮತ್ತು ನೌಕಾ ಕಾರ್ಯಾಚರಣೆಗಳಿಗಾಗಿ ಕಾರ್ಗೋಮ್ಯಾಕ್ಸ್ ಡ್ರೋನ್‍ಗಳನ್ನು ಹೆಚ್ಚಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ನಗರ ಸೇರಿದಂತೆ ದೂರದ ಪರಿಸರದಲ್ಲಿ ತುರ್ತು ಕಾರ್ಯಾಚರಣೆಗಳಿಗೂ ಕಾರ್ಗೋಮ್ಯಾಕ್ಸ್ ಡ್ರೋನ್‍ಗಳನ್ನು ಬಳಕೆಯಾಗುತ್ತಿವೆ.
ಕಾರ್ಗೋಮ್ಯಾಕ್ಸ್ ಲಾಜಿಸ್ಟಿಕ್ಸ್ ಡ್ರೋನ್‍ಗಳು ರಕ್ಷಣೆ, ಲಾಜಿಸ್ಟಿಕ್ಸ್ ಮತ್ತು ವಿಪತ್ತು ಪರಿಹಾರ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇಂತಹ ಬಹು ಉಪಯೋಗಿ ಕಾರ್ಗೋಮ್ಯಾಕ್ಸ್ ಲಾಜಿಸ್ಟಿಕ್ಸ್ ಡ್ರೋನ್‍ಗಳನ್ನು ಹೆಚ್ಚಾಗಿ ವಿದೇಶಗಳಿಂದ ತರಲಾಗುತ್ತದೆ. ಹೀಗಾಗಿ ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ದೇಶವನ್ನು ಡ್ರೋನ್ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿ ಇರಿಸಲು ಬೆಂಗಳೂರಿನ ಸಂಸ್ಥೆಯು ಕಾರ್ಗೋಮ್ಯಾಕ್ಸ್ 20ಕೆಎಚ್‍ಸಿ ಅನ್ನು ತಯಾರಿಸಿದೆ.
ಕಾರ್ಗೋಮ್ಯಾಕ್ಸ್ 20ಕೆಎಚ್‍ಸಿ ಸಂಪೂರ್ಣ ಸ್ವಾಯತ್ತ ವೈಮಾನಿಕ ಲಾಜಿಸ್ಟಿಕ್ಸ್ ಡ್ರೋನ್ ಆಗಿದ್ದು, ಅದು ಪೈಲಟ್ ರಹಿತ ಕಾರ್ಯಾಚರಣೆ ನಡೆಸುತ್ತದೆ. 15 ಕಿ.ಮೀ. ಕಾರ್ಯಾಚರಣೆಯ ವ್ಯಾಪ್ತಿಯನ್ನು ಇದು ಹೊಂದಿದ್ದು, ಸಮುದ್ರ ಮಟ್ಟದಿಂದ 6 ಸಾವಿರ ಮೀಟರ್ ಎತ್ತರದವರೆಗೆ ಕಾರ್ಯಾಚರಣೆಯನ್ನು ಮಾಡುತ್ತದೆ. ಅಲ್ಲದೆ 200ಕೆ.ಜಿ. ಪೇಲೋಡ್ ಸಾಮರ್ಥ್ಯ ಹೊಂದಿದ್ದು, ಭಾರತದ ಅತ್ಯಂತ ಶಕ್ತಿಶಾಲಿ ಕಾರ್ಗೋ ಡ್ರೋನ್ ಎಂಬ ಹೆಗ್ಗಳಿಕೆಗೆ ಕಾರ್ಗೋಮ್ಯಾಕ್ಸ್ 20ಕೆಎಚ್‍ಸಿ ಪಾತ್ರವಾಗಿದೆ.
ಕಾರ್ಗೋಮ್ಯಾಕ್ಸ್ ಲಾಜಿಸ್ಟಿಕ್ಸ್ ಡ್ರೋನ್‍ಗಳನ್ನು ವಿವಿಧ ಪರಿಸರಕ್ಕೆ ತಕ್ಕಂತ ವಿನ್ಯಾಸಗೊಳಿಸಲಾಗಿದೆ. ಸ್ಕ್ಯಾಂಡ್ರಾನ್‍ನ ಕಾರ್ಗೋಮ್ಯಾಕ್ಸ್ ಅನ್ನು ಲಾಸ್ಟ್ ಮೈಲ್ ಡೆಲಿವರಿಗಳಿಗಾಗಿ ಬಳಸಲಾಗುತ್ತದೆ. ನೌಕಾ ಮತ್ತು ದ್ವೀಪ ಕಾರ್ಯಾಚರಣೆಗಳಿಗೂ ಬಳಸಬಹುದಾಗಿದೆ. ಹಾಗೆಯೇ ನೈಸರ್ಗಿಕ ವಿಕೋಪ ಪ್ರದೇಶಗಳಲ್ಲಿ ತುರ್ತು ಪೂರೈಕೆಗಳಿಗೆ ಸೂಕ್ತ ಸಾಧನವಾಗಿದೆ.
-ಅರ್ಜುನ್ ನಾಯ್ಕ್, ಸ್ಕಾಂಡ್ರನ್‍ನ ಸಿಇಒ ಮತ್ತು ಸಂಸ್ಥಾಪಕ