ಜು.26ರಂದು 34ನೇ ವರ್ಷದ ‘ಹುಸೇನ್ ಡೇ’ ಕಾರ್ಯಕ್ರಮ ಆಚರಣೆ : ಆಗಾ ಸುಲ್ತಾನ್
ಬೆಂಗಳೂರು : ‘ಜಾಗತಿಕ ಶಾಂತಿಗಾಗಿ ಜಾತ್ಯತೀತತೆ’ ಘೋಷವಾಕ್ಯದಡಿ 34ನೇ ವರ್ಷದ ‘ಹುಸೇನ್ ಡೇ’ ಕಾರ್ಯಕ್ರಮವನ್ನು ಜು.26ರಂದು ಮಧ್ಯಾಹ್ನ 3 ಗಂಟೆಗೆ ನಗರದ ರಿಚ್ಮಂಡ್ ಟೌನ್‍ನಲ್ಲಿರುವ ಶಿಯಾ ಆರಾಮಗಾಹ್ ದಲ್ಲಿ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಸಂಚಾಲಕ ಆಗಾ ಸುಲ್ತಾನ್ ತಿಳಿಸಿದರು.
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜು.26ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಮಜ್ಲಿಸ್, 1 ರಿಂದ 1.30ರವರೆಗೆ ನಮಾಝ್, ಆನಂತರ ತಬರ್ರುಕ್(ಅನ್ನದಾನ) ವ್ಯವಸ್ಥೆ ಇರುತ್ತದೆ. ಮಧ್ಯಾಹ್ನ 3 ಗಂಟೆಯಿಂದ ಸಂಜೆ 7ರವರೆಗೆ ವೇದಿಕೆಯ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಇಡೀ ವಿಶ್ವದಲ್ಲಿ ಹಿಂಸೆ, ಕ್ರೌರ್ಯ ಹೆಚ್ಚುತ್ತಿದೆ. ನಮ್ಮ ದೇಶದಲ್ಲಿಯೂ ಧರ್ಮ, ಜಾತಿಯ ಹೆಸರಿನಲ್ಲಿ ಹಿಂಸೆ, ಅಸಹಿಷ್ಣುತೆ ಹೆಚ್ಚುತ್ತಿರುವುದು ನಾವು ನೋಡುತ್ತಿದ್ದೇವೆ. ಆದುದರಿಂದ, ಈ ವರ್ಷ ‘ಜಾಗತಿಕ ಶಾಂತಿಗಾಗಿ ಜಾತ್ಯತೀತತೆ’ ಎಂಬ ಘೋಷವಾಕ್ಯದಡಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಆಗಾ ಸುಲ್ತಾನ್ ತಿಳಿಸಿದರು.
ಹಿಂಸೆ ಹಾಗೂ ಕ್ರೌರ್ಯ ದಿನಗೂಲಿ ಮಾಡುವವರು, ಬಡವರು, ಸಾಮಾನ್ಯ ಜನರ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಗಲ್ಫ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಪ್ರತಿಯೊಬ್ಬರೂ ಎದುರಿಸುವಂತಾಗಿದೆ. ಯುದ್ಧಗಳಿಂದ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವವರಿಗೆ ಲಾಭ ಆಗುತ್ತದೆಯೇ ಹೊರತು, ಬೇರೆ ಯಾರಿಗೂ ಇದರಿಂದ ಪ್ರಯೋಜನವಾಗುವುದಿಲ್ಲ ಎಂದು ಅವರು ಹೇಳಿದರು.
1400 ವರ್ಷಗಳ ಹಿಂದೆ ಕರ್ಬಲಾ ಯುದ್ಧದಲ್ಲಿ ಇಮಾಮ್ ಹುಸೇನ್(ಅ) ಇಡೀ ವಿಶ್ವಕ್ಕೆ ತ್ಯಾಗ, ಬಲಿದಾನ, ಸಾಮಾಜಿಕ ನ್ಯಾಯದ ಸಂದೇಶವನ್ನು ನೀಡುತ್ತಾ ಹುತಾತ್ಮರಾದರು. ನಮ್ಮ ಹಿರಿಯರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಮೂಲಕ ನಮಗೆ ಸಂವಿಧಾನ ನೀಡಿದರು. ಇಂದು ನಾವು ಆ ಜಾತ್ಯತೀತ ಸಂವಿಧಾನವನ್ನು ರಕ್ಷಿಸಿಕೊಳ್ಳಬೇಕಿದೆ ಎಂದು ಆಗಾ ಸುಲ್ತಾನ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ರಾಜ್ಯಸಭಾ ಸದಸ್ಯರಾದ ಜಿ.ಸಿ.ಚಂದ್ರಶೇಖರ್, ಪವನ್ ಖೇರಾ, ಸಂಸದ ಇಮ್ರಾನ್ ಮಸೂದ್, ಶಾಸಕರಾದ ತನ್ವೀರ್ ಸೇಠ್, ಎನ್.ಎ.ಹಾರಿಸ್, ಸಂಗೀತ ಸಂಯೋಜಕ ಸಲೀಂ ಮರ್ಚೆಂಟ್, ವಿದ್ವಾಂಸ ಪಂಡಿತ್ ವಿಜಯಕುಮಾರ್ ಶರ್ಮಾ, ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಡಾ.ಸಯ್ಯದ್ ಮುಹಮ್ಮದ್ ಅಲಿ ಅಲ್-ಹುಸೈನಿ, ಸೇಂಟ್ ಜೋಸೆಫ್ ವಿವಿ ಕುಲಪತಿ ರೆ.ಫಾ.ವಿಕ್ಟರ್ ಲೋಬೊ, ಗುರುಸಿಂಗ್ ಸಭಾದ ಮುಖ್ಯ ಗ್ರಂಥಿ ಜ್ಞಾನಿ ಬುಟಾ ಸಿಂಗ್, ಇಸ್ಲಾಮಿಕ್ ವಿದ್ವಾಂಸ ಡಾ.ಮುಹಮ್ಮದ್ ಸಮೀರ್ ಶಫಿ ಸಿದ್ದೀಖಿ, ಮೌಲಾನಾ ಸಯ್ಯದ್ ಖಮರ್ ಹಸ್ನೈನ್ ರಿಝ್ವಿ, ಭಕ್ತಿ ಭವನ ಸೆಮಿನರಿಯ ರೆಕ್ಟರ್ ಫಾ.ಆಡ್ರಿಯನ್ ಮಸ್ಕರೆನ್ಹಾಸ್ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.