×
Ad

ಬೆಂಗಳೂರು | ಮೊಬೈಲ್ ಸ್ಪೀಕರ್ ಆನ್ ಮಾಡಲು ಒತ್ತಾಯಿಸಿದ್ದಕ್ಕೆ ಪತ್ನಿಯ ಕೊಲೆ: ಪತಿಯ ಬಂಧನ

Update: 2025-05-05 19:42 IST

ಸಾಂದರ್ಭಿಕ ಚಿತ್ರ | PC : freepik.com

ಬೆಂಗಳೂರು : ಮೊಬೈಲ್ ಕರೆಯಲ್ಲಿ ಮಾತನಾಡುವಾಗ ಸ್ಪೀಕರ್ ಆನ್ ಮಾಡಲು ಒತ್ತಾಯಿಸಿದ್ದಕ್ಕೆ ಗಲಾಟೆ ನಡೆದು ಪತ್ನಿಯ ಕತ್ತು ಹಿಸುಕಿ ಕೊಲೆಗೈದ ಪ್ರಕರಣದಡಿ ಪತಿಯನ್ನು ಇಲ್ಲಿನ ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.

ಪತ್ನಿ ನಮಿತಾ ಸಾಹು(43) ಕೊಲೆಯಾದವರು ಎಂದು ಗುರುತಿಸಲಾಗಿದ್ದು, ಲೋಕೇಶ್ ಕುಮಾರ್ ಗೆಹ್ಲೋಟ್ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ.

ಎಪ್ರಿಲ್ 24ರಂದು ಬಸವೇಶ್ವರ ನಗರ ಠಾಣಾ ವ್ಯಾಪ್ತಿಯ ಮಹಾಗಣಪತಿ ನಗರದ ಮನೆಯಲ್ಲಿ ನಮಿತಾ ಸಾಹು ಅವರನ್ನು ಹತ್ಯೆ ಮಾಡಲಾಗಿತ್ತು. ಮನೆ ಮಾಲಕ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಸ್ಥಾನ ಮೂಲದ ಲೋಕೇಶ್ ಕುಮಾರ್ ಎಂಬಾತ ನಗರದ ಕಬ್ಬನ್ ಪೇಟೆಯಲ್ಲಿ ಫೋಟೋ ಸ್ಟುಡಿಯೋ ಹೊಂದಿದ್ದ. ಐದು ವರ್ಷಗಳ ಹಿಂದೆ ಮ್ಯಾಟ್ರಿಮೋನಿ ಮೂಲಕ ಪರಿಚಯವಾದ ನಮಿತಾ ಸಾಹು ಜೊತೆ ಮದುವೆಯಾಗಿ ಮಹಾಗಣಪತಿ ನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ. ದಂಪತಿಗೆ ಮೂರು ವರ್ಷದ ಹೆಣ್ಣು ಮಗುವಿದೆ. ಇತ್ತೀಚೆಗೆ ದಂಪತಿ ನಡುವೆ ಸಣ್ಣಪುಟ್ಟ ವಿಚಾರಗಳಿಗೆ ಗಲಾಟೆಯಾಗುತ್ತಿತ್ತು ಎನ್ನಲಾಗಿದೆ.

ಎಪ್ರಿಲ್ 24ರಂದು ಮನೆಯಲ್ಲಿದ್ದ ಲೋಕೇಶ್ ಕುಮಾರ್‌ಗೆ ಪತ್ನಿ ನಮಿತಾ ಸಾಹು ಸಹೋದರ ಕರೆ ಮಾಡಿದ್ದರು. ಈ ವೇಳೆ ಮೊಬೈಲ್ ಸ್ಪೀಕರ್ ಆನ್ ಮಾಡುವಂತೆ ನಮಿತಾ ಒತ್ತಾಯಿಸಿದ್ದರು. ಆದರೆ, ಲೋಕೇಶ್ ಕುಮಾರ್ ಸ್ಪೀಕರ್ ಆನ್ ಮಾಡಲು ನಿರಾಕರಿಸಿದಾಗ ಇಬ್ಬರ ನಡುವೆ ಗಲಾಟೆಯಾಗಿತ್ತು. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ನಮಿತಾ ಸಾಹು ಅವರ ಕತ್ತು ಹಿಸುಕಿ ಲೋಕೇಶ್ ಕುಮಾರ್ ಹತ್ಯೆ ಮಾಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದು ಬಂದಿರುವುದಾಗಿ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News