×
Ad

ಬಾಬಾ ಬುಡಾನ್‌ಗಿರಿಯಲ್ಲಿ ಶಾಂತಿಯುತವಾಗಿ ನಡೆದ ಉರೂಸ್

Update: 2025-03-15 23:41 IST

ಚಿಕ್ಕಮಗಳೂರು: ಶ್ರೀಗುರು ದತ್ತಾತ್ರೇಯ ಬಾಬಾಬುಡಾನ್ ಸ್ವಾಮಿ ದರ್ಗಾದಲ್ಲಿ ಜಿಲ್ಲಾಡಳಿತದ ವತಿಯಿಂದ ನಡೆಯುವ ಸಂದಲ್ ಉರೂಸ್ ಕಾರ್ಯಕ್ರಮ ಶನಿವಾರ ಚಾಲನೆ ನೀಡಲಾಗಿದ್ದು, ಕಾರ್ಯಕ್ರಮ ಶಾಂತಿಯುತವಾಗಿ ನಡೆಯಿತು.

ಅತ್ತಿಗುಂಡಿಯಿಂದ ಬಾಬಾ ಬುಡಾನ್‌ಗಿರಿ ದರ್ಗಾದವರೆಗೆಗೆ ಸಾವಿರಾರು ಫಕೀರರು ಹಾಗೂ ಸಮುದಾಯದ ಮುಖಂಡರು ಸಂದಲ್‌ಅನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುವುದು ನಂತರ ದರ್ಗಾದ ಆವರಣದಲ್ಲಿ ಪ್ರಾರ್ಥನೆ ಸಲ್ಲಿಸುವುದರೊಂದಿಗೆ ಉರೂಸ್ ಆಚರಿಸಲಾಯಿತು.

ಉರೂಸ್ ಹಿನ್ನೆಲೆಯಲ್ಲಿ ಅತ್ತಿಗುಂಡಿಯಿಂದ ಮೆರವಣಿಗೆಯಲ್ಲಿ ತರಲಾದ ಸಂದಲ್(ಗಂಧ)ಅನ್ನು ಫಕೀರರು ಹಾಗೂ ಸಮುದಾಯದ ಮುಖಂಡರು ಶಾಖಾದ್ರಿ ಅವರಿಗೆ ಒಪ್ಪಿಸಿದರು. ನಂತರ ಶಾಖಾದ್ರಿ ಅವರು ಪಾರಂಪರಿಕ ಧಾರ್ಮಿಕ ವಿಧಿಯಂತೆ ಸಂದಲ್ ಹಾಗೂ ಹಸಿರು ಬಟ್ಟೆಯನ್ನು ಬಾಬಾ ಬುಡಾನ್‌ಗಿರಿಯ ಗುಹೆಯೊಳಗೆ ಇರುವ ಗೋರಿ, ಪೀಠಕ್ಕೆ ಲೇಪಿಸಲು ಮುಂದಾದರು. ಆದರೆ, ಸ್ಥಳದಲ್ಲಿದ್ದ ಅಧಿಕಾರಿಗಳು ನ್ಯಾಯಾಲಯದ ಆದೇಶದ ಕಾರಣ ನೀಡಿ ಸಂದಲ್ ಹಾಗೂ ಹಸಿರು ಬಟ್ಟೆಯನ್ನು ಗುಹೆಯೊಳಗೆ ಕೊಂಡೊಯ್ಯಲು ಶಾಖಾದ್ರಿಗೆ ಅವಕಾಶ ನೀಡಲಿಲ್ಲ. ನಂತರ ಸಂದಲ್ ಹಾಗೂ ಹಸಿರು ಬಟ್ಟೆಯನ್ನು ಮುಝಾವರ್‌ಗೆ ಹಸ್ತಾಂತರಿಸಿ ಧಾರ್ಮಿಕ ವಿಧಿ ನೆರವೇರಿಸಿದರು.

ಶಾಖಾದ್ರಿ ಅವರಿಗೆ ಸಂದಲ್ ಹಾಗೂ ಹಸಿರು ಬಟ್ಟೆಯೊಂದಿಗೆ ಗುಹೆಯೊಳಗೆ ಪ್ರವೇಶ ನಿರಾಕರಣೆಯಿಂದಾಗಿ ಸ್ಥಳದಲ್ಲಿ ಸಣ್ಣ ಗೊಂದಲ ಉಂಟಾಯಿತಾದರೂ ಸ್ಥಳದಲ್ಲಿದ್ದ ಪೊಲೀಸರು, ಅಧಿಕಾರಿಗಳು, ಸಮುದಾಯದ ಮುಖಂಡರು ಯಾವುದೇ ವಾಗ್ವಾದಕ್ಕೆ ಅವಕಾಶ ಆಸ್ಪದ ನೀಡಲಿಲ್ಲ. ನಂತರ ಗುಹೆಯ ಮುಂಭಾಗದ ಆವರಣದಲ್ಲಿ ಫಕೀರರು ಹಾಗೂ ಸಮುದಾಯದ ಜನರು ಪ್ರಾರ್ಥನೆ ಸಲ್ಲಿಸುವ ಮೂಲಕ ಉರೂಸ್‌ನ ಮೊದಲ ದಿನದ ಧಾರ್ಮಿಕ ವಿಧಿ ನೆರವೇರಿಸಿದರು.

ಉರೂಸ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ದರ್ಗಾದ ಆವರಣದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿತ್ತು. ಉರೂಸ್‌ಗೆ ಜಿಲ್ಲೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ಸುಮಾರು 5-6ಸಾವಿರ ಭಕ್ತರು ಹಾಗೂ ಫಕೀರರು ಭಾಗವಹಿಸಿದ್ದರು. ವಾಹನ, ಜನದಟ್ಟಣೆ ನಿಯಂತ್ರಣದ ಉದ್ದೇಶದಿಂದ ಬಾಬಾ ಬುಡಾನ್‌ಗಿರಿ ಹಾಗೂ ಮುಳ್ಳಯ್ಯನಗಿರಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು.

ಉರೂಸ್‌ನಲ್ಲಿ ಸೈಯದ್ ಗೌಸ್ ಮೊಹಿದ್ದೀನ್ ಶಾಖಾದ್ರಿ, ಸೈಯದ್ ಫಕ್ರುದ್ದೀನ್ ಶಾಖಾದ್ರಿ, ಸಮುದಾಯದ ಮುಖಂಡರಾದ ಜಮ್ಶೀದ್, ಮುನೀರ್, ಸಿರಾಜ್, ನಸೀರ್ ಅಹ್ಮದ್, ಖಲಂದರ್ ಮತ್ತಿತರರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News