‘ಹೈದರಾಬಾದ್-ಬೆಂಗಳೂರು ಕೈಗಾರಿಕಾಭಿವೃದ್ಧಿ ಕಾರಿಡಾರ್ ಯೋಜನೆ’ | 3269.29 ಎಕರೆ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಹಿಂಪಡೆಯಲು ಕ್ರಮ : ಬೈರತಿ ಸುರೇಶ್
ಬೆಂಗಳೂರು : ರಾಜ್ಯ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಯಾದಗಿರಿ ಜಿಲ್ಲೆ ಮತ್ತು ತಾಲೂಕು, ಕಡೇಚೂರು ಮತ್ತು ದದ್ದಲ್, ಶೆಟ್ಟಿಹಳ್ಳಿ ಮತ್ತು ರಾಚನಹಳ್ಳಿ ಗ್ರಾಮಗಳಲ್ಲಿ ಕೈಗಾರಿಕಾ ಪ್ರದೇಶ, ಹೈದರಾಬಾದ್-ಬೆಂಗಳೂರು ಕೈಗಾರಿಕಾಭಿವೃದ್ಧಿ ಕಾರಿಡಾರ್ ಯೋಜನೆಗಾಗಿ 3269.29 ಎಕರೆ ಜಮೀನನ್ನು 2021ರ ಸೆ.8ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದರು.
ಶುಕ್ರವಾರ ವಿಧಾನಸಭೆಯಲ್ಲಿ ಜೆಡಿಎಸ್ ಸದಸ್ಯ ಶರಣಗೌಡ ಕಂದಕೂರ್ ಕೇಳಿದ ಪ್ರಶ್ನೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಪರವಾಗಿ ಉತ್ತರ ನೀಡಿದ ಅವರು, ಪ್ರಾಥಮಿಕ ಅಧಿಸೂಚನೆ ಹೊರಡಿಸಿರುವ 3269.29 ಎರಕೆ ಜಮೀನಿನ ಶೇ.90ರಷ್ಟು ಭೂ ಮಾಲಕರು ಭೂ ಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಅದರಂತೆ, ಕೆಐಎಡಿಬಿಯ 388ನೆ ಸಭೆಯಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿರುವ 3269.29 ಎಕರೆ ಜಮೀನನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡುವ ಸಂಬಂಧ ಸರಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯು ಪರಿಶೀಲನೆಯಲ್ಲಿದೆ. ಅಲ್ಲದೆ, ಜಮೀನು ಹಂಚಿಕೆ ಪಡೆದ ಉದ್ದಿಮೆದಾರರು ಗುತ್ತಿಗೆ ಮತ್ತು ಮಾರಾಟ ಕರಾರು ಪತ್ರದ ಷರತ್ತು ಮತ್ತು ನಿಬಂಧನೆಗಳನ್ವಯ ನಿಗದಿತ ಅವಧಿಯೊಳಗೆ ಯೋಜನೆ ಅನುಷ್ಠಾನಗೊಳಿಸದಿದ್ದಲ್ಲಿ ಅವರಿಗೆ ನೋಟಿಸ್ ನೀಡಿ ಜಮೀನು ಹಿಂಪಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸುರೇಶ್ ಹೇಳಿದರು.