ಬೆಳಗಾವಿ | ಹತ್ತರಗಿ ಟೋಲ್ ನಾಕಾ ಬಳಿ ಕಲ್ಲುತೂರಾಟ ಪ್ರಕರಣ; ಆರು ಮಂದಿಯ ಬಂಧನ
ಬೆಳಗಾವಿ : ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ನಾಕಾ ಬಳಿ ನಡೆದ ರೈತರ ಪ್ರತಿಭಟನೆ ವೇಳೆ ನಡೆದ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಿಸಿ ಯಮಕನಮರಡಿ ಠಾಣೆ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.
ಹೆಬ್ಬಾಳದ ಚನ್ನಗೌಡ ಸಸಾಲಟ್ಟಿ, ಪ್ರಶಾಂತ ಮುಗಳಿ, ವಿನಾಯಕ ಕೋಟಿವಾಲಿ, ಉಳ್ಳಾಗಡ್ಡಿ ಖಾನಾಪುರದ ಮಲ್ಲಪ್ಪ ಘಟಗಿ, ಕೇಸ್ತಿಯ ಶಿವಪ್ಪ ವಾಣಿ ಹಾಗೂ ಬಿದ್ರೆವಾಡಿಯ ಸೋಮನಾಥ ಹಿರೇಮಠ ಬಂಧಿತರಾದವರು.
ಪ್ರತಿಭಟನೆಯ ಸಂದರ್ಭದಲ್ಲಿ ಕೆಲವರು ಪೊಲೀಸರ ಮೇಲೆ ಕಲ್ಲು ತೂರಿದ್ದು, ಸಾರಿಗೆ ಸಂಸ್ಥೆಯ ನಾಲ್ಕು ಬಸ್‌ಗಳು ಹಾಗೂ ಪೊಲೀಸ್ ಇಲಾಖೆಯ ಎರಡು ಬಸ್‌ಗಳಿಗೆ ಹಾನಿಯಾಗಿದೆ. ಈ ಘಟನೆಯಲ್ಲಿ 12 ಮಂದಿ ಪೊಲೀಸರು ಗಾಯಗೊಂಡಿದ್ದಾರೆ.
ಸಿಸಿಟಿವಿ ದೃಶ್ಯಾವಳಿ ಮತ್ತು ಸಾಕ್ಷ್ಯಾಧಾರಗಳ ಆಧಾರದಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಅವರ ವಿರುದ್ಧ ದೊಂಬಿ, ಗುಂಪುಗಲಭೆ ಹಾಗೂ ಮಾರಣಾಂತಿಕ ಹಲ್ಲೆ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ತಿಳಿಸಿದ್ದಾರೆ.