ಬೆಳಗಾವಿ | ಮುಸ್ಲಿಂ ಮುಖ್ಯಶಿಕ್ಷಕನ ವರ್ಗಾವಣೆಗಾಗಿ ಶಾಲೆಯ ನೀರಿನ ಟ್ಯಾಂಕ್‌ಗೆ ವಿಷವಿಟ್ಟಿದ್ದ ದುಷ್ಟರು; ಮೂವರು ಆರೋಪಿಗಳ ಬಂಧನ
ಆರೋಪಿಗಳಾದ ಸಾಗರ ಪಾಟೀಲ/ಕೃಷ್ಣ ಮಾದರ/ನಾಗನಗೌಡ ಪಾಟೀಲ
ಬೆಳಗಾವಿ : ಇಲ್ಲಿನ ಸವದತ್ತಿ ತಾಲ್ಲೂಕಿನ ಹೂಲಿಕಟ್ಟಿಯ ಸರಕಾರಿ ಪ್ರಾಥಮಿಕ ಶಾಲೆಯ ಕುಡಿಯುವ ನೀರಿನ ಟ್ಯಾಂಕ್‌ಗೆ ಕೀಟನಾಶಕ ಸುರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಸವದತ್ತಿ ಠಾಣೆ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಬಂಧಿತ ಆರೋಪಿಗಳನ್ನು ಸಾಗರ ಪಾಟೀಲ, ನಾಗನಗೌಡ ಪಾಟೀಲ ಮತ್ತು ಕೃಷ್ಣ ಮಾದರ ಎಂದು ಗುರುತಿಸಲಾಗಿದೆ.
ಘಟನೆ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ್, ಶ್ರೀರಾಮ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ ಸಾಗರ ಪಾಟೀಲ್, ಸರಕಾರಿ ಶಾಲೆಯಲ್ಲಿ 13 ವರ್ಷಗಳಿಂದ ಮುಖ್ಯಶಿಕ್ಷಕರಾಗಿದ್ದ ಸುಲೇಮಾನ್ ಗೋರಿನಾಯ್ಕ ವರ್ಗಾವಣೆ ಆಗಬೇಕು ಮತ್ತು ಮುಖ್ಯಶಿಕ್ಷಕನಿಗೆ ಕೆಟ್ಟ ಹೆಸರು ತರಲು ಬಯಸಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ತಿಳಿಸಿದ್ದಾರೆ.
ಕೃತ್ಯ ಎಸಗಿದ ಮೂವರು ಆರೋಪಿಗಳು ಪರಸ್ಪರ ಪರಿಚಿತರು. ಆರೋಪಿ ನಾಗನಗೌಡ ಎಂಬಾತ ಸಾಗರ್‌ನ ಸಂಬಂಧಿಯಾಗಿದ್ದನು. ಸಾಗರ್ ನೊಂದಿಗೆ ಈ ಹಿಂದೆ ಚಾಲಕನಾಗಿ ಕೆಲಸ ಮಾಡುತ್ತಿದ್ದ ಕೃಷ್ಣ, ಬೇರೆ ಜಾತಿಯ ಹುಡಿಗಿಯನ್ನು ಪ್ರೀತಿಸುತ್ತಿದ್ದ. ಅದನ್ನು ಬಹಿರಂಗಪಡಿಸುವುದಾಗಿ ಸಾಗರ್ ಬೆದರಿಸಿ, ಕೃಷ್ಣ ಮೂಲಕ ಈ ಕೃತ್ಯ ಎಸಗಿದ್ದ. ಈ ಕೃತ್ಯಕ್ಕೆ ವಿದ್ಯಾರ್ಥಿಯೊಬ್ಬನಿಗೆ ಆಮಿಷವೊಡ್ಡಿ ಬಳಸಿಕೊಳ್ಳಲಾಗಿತ್ತು’ ಎಂದು ಮಾಹಿತಿ ನೀಡಿದರು.
ಏನಿದು ಘಟನೆ :
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದ ಸರಕಾರಿ ಶಾಲೆಯ ಕುಡಿಯುವ ನೀರಿನ ಟ್ಯಾಂಕ್‌ಗೆ ಕೀಟನಾಶ ಬೆರೆಸಿದ್ದ ಘಟನೆ ಜುಲೈ 14ರಂದು ನಡೆದಿತ್ತು. ಪರಿಣಾಮ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ ನಂತರ, ಕೀಟನಾಶಕ ಬೆರೆಸಿದ್ದ ನೀರನ್ನು ಕುಡಿದು 11 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರು.
ಈ ಕುರಿತು ಪ್ರಕರಣ ದಾಖಲಿಸಿಕೊಂಡು ಸವದತ್ತಿ ಠಾಣೆ ಪೊಲೀಸರು ತನಿಖೆ ನಡೆಸಿದ್ದರು.